ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದ ಮಾದರಿಯಲ್ಲಿ ವೇತನವನ್ನು ಪಡೆದುಕೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಪ್ರಯತ್ನಗಳು ಸಾಗುತ್ತಿವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಕ್ಷರಿ ಅವರು ತಿಳಿಸಿದ್ದಾರೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇಂದ್ರ ಮಾದರಿಯ ವೇತನವನ್ನು ಜಾರಿಗೊಳಿಸಲು ಹಾಗೂ ಎನ್ಪಿಎಸ್ (NPS) ಯೋಜನೆಯನ್ನು ರದ್ದುಪಡಿಸಿ, ಹಳೇ ಪಿಂಚಣಿ ಯೋಜನೆ (OPS) ಯನ್ನು ಮರು ಜಾರಿಗೊಳಿಸಲು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರಲಾಗುತ್ತಿದೆ.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರಿ ನೌಕರರಿಗೆ ಯಾವುದೇ ಹೋರಾಟವಿಲ್ಲದೆಯೇ 6ನೇ ಮತ್ತು 7ನೇ ವೇತನ ಆಯೋಗಗಳನ್ನು ಜಾರಿಗೊಳಿಸಿದ್ದರು. ಈ ಸರ್ಕಾರ ಇನ್ನೂ ಎರಡು ವರ್ಷ ಅಧಿಕಾರದಲ್ಲಿರಲಿದ್ದು, ಅಷ್ಟರೊಳಗೆ ಕೇಂದ್ರ ಮಾದರಿಯ ವೇತನವನ್ನು ನೌಕರರು ಪಡೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಹಳೇ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಶೀಘ್ರವಾಗಿ ವರದಿ ತರಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ಎನ್ಪಿಎಸ್ ತೀರ್ಮಾನದ ವರದಿಯನ್ನು ಬೇಗನೆ ನೀಡುವಂತೆ ಕೋರಲಾಗಿದ್ದು, ಒಂದು ವೇಳೆ ಹಳೇ ಪಿಂಚಣಿ ವ್ಯವಸ್ಥೆ ಜಾರಿಯಾಗದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಖಾಲಿ ಹುದ್ದೆಗಳ ಭರ್ತಿ: ರಾಜ್ಯದಲ್ಲಿ ಸದ್ಯ 2.85 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿಯೂ ಸಂಘದ ಪ್ರಯತ್ನಗಳು ಮುಂದುವರಿದಿವೆ. ಜೊತೆಗೆ 7ನೇ ವೇತನ ಆಯೋಗದ ಎರಡನೇ ವರದಿ ಅನುಷ್ಠಾನ ಹಾಗೂ ಸರಿಯಾದ ಸಮಯಕ್ಕೆ ತುಟ್ಟಿಭತ್ಯೆ ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ.
ಆರೋಗ್ಯ ಯೋಜನೆ ಮತ್ತು ಪರಿಹಾರ: ನೌಕರರಿಗೆ ಅಪಘಾತ ಪರಿಹಾರ ಸಿಗುತ್ತಿದ್ದು, ನೌಕರರ ಅವಲಂಬಿತರ ಹೆಸರನ್ನು ಆರೋಗ್ಯ ಯೋಜನೆಯಲ್ಲಿ ಸೇರ್ಪಡೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಚಿಕಿತ್ಸಾ ವೆಚ್ಚಗಳ ದರ ಪರಿಷ್ಕರಣೆಗೆ ಸರ್ಕಾರ ಸಮ್ಮತಿ ನೀಡುವ ಭರವಸೆ ಇದೆ ಎಂದು ಅವರು ಹೇಳಿದರು.








