ವಾಷಿಂಗ್ಟನ್:ಅಮೆರಿಕದ ಶ್ವೇತಭವನದ (White House) ಸಂಕೀರ್ಣದ ಸಮೀಪವಿರುವ 17ನೇ ಸ್ಟ್ರೀಟ್ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ NW ಜಂಕ್ಷನ್ನಲ್ಲಿ, ಐಸೆನ್ಹೋವರ್ ಎಕ್ಸಿಕ್ಯೂಟಿವ್ ಆಫೀಸ್ ಬಿಲ್ಡಿಂಗ್ ಹತ್ತಿರ ಸುಮಾರು 30 ಸುತ್ತು ಗುಂಡಿನ ಸೌಂಡ್ ಕೇಳಿಬಂದಿದೆ. ಈ ಘಟನೆಯಲ್ಲಿ ಶಂಕಿತ ಬಂದೂಕುಧಾರಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ಕಾನೂನು ಜಾರಿ ಸಂಸ್ಥೆಗಳ ಮೂಲಗಳನ್ನು ಉಲ್ಲೇಖಿಸಿ ಸಿಬಿಎಸ್ ನ್ಯೂಸ್ (CBS News) ವರದಿ ಮಾಡಿದೆ.
ವರದಿಯ ಪ್ರಕಾರ, ಶಂಕಿತ ದಾಳಿಕೋರನು ಶ್ವೇತಭವನದ ಹೊರಗಿರುವ ಭದ್ರತಾ ಬೂತ್ ಒಂದರ (Security Booth) ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ಬೂತ್ನಲ್ಲಿ ಯುಎಸ್ ಸೀಕ್ರೆಟ್ ಸರ್ವಿಸ್ (US Secret Service) ಅಧಿಕಾರಿಗಳು ಕರ್ತವ್ಯದಲ್ಲಿದ್ದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದು, ಶಂಕಿತನನ್ನು ಗಾಯಗೊಳಿಸಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಮತ್ತೊಬ್ಬ ನಾಗರಿಕನಿಗೂ (Bystander) ಗಾಯಗಳಾಗಿವೆ ಎಂದು ವರದಿಯಾಗಿದೆ. ಆದರೆ, ಯಾವುದೇ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳಿಗೆ ಗುಂಡು ತಗುಲಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಎಕ್ಸ್ (X) ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಎಫ್ಬಿಐ ವಾಷಿಂಗ್ಟನ್ ಫೀಲ್ಡ್ ಆಫೀಸ್ (FBI WFO), “ನಮ್ಮ ಯುಎಸ್ ಸೀಕ್ರೆಟ್ ಸರ್ವಿಸ್ ಪಾಲುದಾರರಿಗೆ ಬೆಂಬಲವಾಗಿ, ಶ್ವೇತಭವನದ ಬಳಿ ಗುಂಡು ಹಾರಿಸಿರುವ ವರದಿಗಳಿಗೆ ಎಫ್ಬಿಐ ವಾಷಿಂಗ್ಟನ್ ಫೀಲ್ಡ್ ಆಫೀಸ್ ತಕ್ಷಣ ಸ್ಪಂದಿಸಿದೆ” ಎಂದು ತಿಳಿಸಿದೆ.
ಘಟನೆಯ ನಂತರ ಶ್ವೇತಭವನದ ಸುತ್ತಲೂ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದ್ದು, ಮುನ್ನೆಚ್ಚರಿಕೆಯಾಗಿ ಹೇರಲಾಗಿದ್ದ ತಾತ್ಕಾಲಿಕ ಲಾಕ್ಡೌನ್ ಅನ್ನು ನಂತರ ತೆರವುಗೊಳಿಸಲಾಗಿದೆ.








