ಕೋಲಾರ: ಬಂಡೆ ಬ್ಲಾಸ್ಟಿಂಗ್ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಿಡಿಮದ್ದು ಸಿಡಿದು ನಾಲ್ವರು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಕದರೇನಹಳ್ಳಿಯಲ್ಲಿ ನಡೆದಿದೆ.
ಕದರೇನಹಳ್ಳಿಯ ಟೇಕಲ್ ಬೆಟ್ಟದ ಬಳಿ ಇರುವ ಹನುಮಂತಪ್ಪ ಎಂಬುವವರಿಗೆ ಸೇರಿದ ಬಂಡೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಬಂಡೆಯನ್ನು ಒಡೆಯಲು ಸಿಡಿಮದ್ದು ಇಡುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.
ನಾಲ್ವರಿಗೆ ಗಾಯ, ಆಸ್ಪತ್ರೆಗೆ ದಾಖಲು: ಸ್ಫೋಟದ ತೀವ್ರತೆಗೆ ಕೊಪ್ಪಳ ಮೂಲದ ಚಿರಂಜೀವಿ, ರಾಮು, ಹೇಮಂತ್ ಹಾಗೂ ರಾಜು ಎಂಬುವವರು ಗಾಯಗೊಂಡಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ಸಹೋದ್ಯೋಗಿಗಳು ಗಾಯಾಳುಗಳನ್ನು ರಕ್ಷಿಸಿ, ಚಿಕಿತ್ಸೆಗಾಗಿ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಿಗೆ ಸದ್ಯ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬ್ಲಾಸ್ಟಿಂಗ್ ನಡೆಸಲು ಸೂಕ್ತ ಪರವಾನಗಿ ಇತ್ತೇ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
2028ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ: ಡಿಸಿಎಂ ಡಿ.ಕೆ.ಶಿವಕುಮಾರ್








