ಲಖನೌ: ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಸಂಭವಿಸಿದ ಭೀಕರ ಗುಡುಗು ಸಹಿತ ಮಳೆ ಮತ್ತು ಸಿಡಿಲು ಅಕ್ಷರಶಃ ಮರಣಮೃದಂಗವನ್ನೇ ಬಾರಿಸಿದೆ. ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಈ ನೈಸರ್ಗಿಕ ವಿಕೋಪಕ್ಕೆ ಕಳೆದ 24 ಗಂಟೆಗಳಲ್ಲಿ ಸುಮಾರು 60 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ಖಚಿತಪಡಿಸಿದ್ದಾರೆ.
ಅಕಾಲಿಕ ಮಳೆ ಮತ್ತು ತೀವ್ರ ವೇಗದ ಬಿರುಗಾಳಿಯು ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದ್ದು, ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ.ರಾಜ್ಯ ಪರಿಹಾರ ಕಮಿಷನರ್ ಕಚೇರಿ ಬಿಡುಗಡೆ ಮಾಡಿದ ವರದಿಯ ಪ್ರಕಾರ ಪ್ರಯಾಗ್ರಾಜ್, ಕಾನ್ಪುರ ದೇಹತ್ ಮತ್ತು ಫತೇಪುರ್ ಜಿಲ್ಲೆಗಳಲ್ಲಿ ವಿಕೋಪದ ತೀವ್ರತೆ ಹೆಚ್ಚಾಗಿತ್ತು.ಗಂಟೆಗೆ ಸುಮಾರು 100 ಕಿಲೋಮೀಟರ್ ವೇಗದಲ್ಲಿ ಬೀಸಿದ ಬಿರುಗಾಳಿಯು ಹತ್ತಿರದ ಗ್ರಾಮಗಳನ್ನು ತಲ್ಲಣಗೊಳಿಸಿದೆ.
ಮೃತಪಟ್ಟವರಲ್ಲಿ ಹೆಚ್ಚಿನವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಅಥವಾ ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ಆಶ್ರಯ ಪಡೆದವರಾಗಿದ್ದಾರೆ. ಸಿಡಿಲು ಬಡಿದು ಅತಿ ಹೆಚ್ಚು ಸಾವುಗಳು ಸಂಭವಿಸಿವೆ. ಗಾಳಿಯ ಆರ್ಭಟಕ್ಕೆ ರಾಜ್ಯಾದ್ಯಂತ ನೂರಾರು ಮರಗಳು ಬುಡಮೇಲಾಗಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಹಳೆಯ ಮನೆಗಳು ಮತ್ತು ಗೋಡೆಗಳು ಕುಸಿದು ಬಿದ್ದಿದ್ದರಿಂದ ಹಲವರು ಅದರಡಿ ಸಿಲುಕಿ ಮೃತಪಟ್ಟಿದ್ದಾರೆ. ಕಟಾವಿಗೆ ಬಂದಿದ್ದ ಬೆಳೆಗಳು ಮಳೆ ಮತ್ತು ಆಲಿಕಲ್ಲು ಮಳೆಗೆ ಸಿಲುಕಿ ನಾಶವಾಗಿದ್ದು, ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.








