ಬೆಂಗಳೂರು : ಗರ್ಭಕಂಠದ ಕ್ಯಾನ್ಸರ್ ತಡೆಗೆ 4 ಜಿಲ್ಲೆಗಳ 14 ವಯಸ್ಸಿನ ಸರ್ಕಾರಿ ಶಾಲೆ, ಸರ್ಕಾರಿ ಅನುದಾನಿತ ಶಾಲೆಗಳು ಮತ್ತು ಶಾಲೆ ಬಿಟ್ಟ ಹೆಣ್ಣುಮಕ್ಕಳಿಗೆ ನಿಗದಿತ ಅವಧಿಯೊಳಗೆ ಲಸಿಕೆ ನೀಡುವಂತೆ ಇದೀಗ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಹೌದು ರಾಜ್ಯದಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ ಹೆಚ್ಪಿವಿ ಸೋಂಕಿನಿಂದ ರಕ್ಷಣೆ ನೀಡಲು ಮತ್ತು ಸಂಭಾವ್ಯ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಗಣಿಬಾಧಿತ 4 ಜಿಲ್ಲೆಗಳಿಗೆ ಚುಚ್ಚುಮದ್ದು ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಾಗಾಗಿ ಚುಚ್ಚುಮದ್ದು ಕಾರ್ಯಕ್ರಮಕ್ಕಾಗಿ ತುಮಕೂರು ಜಿಲ್ಲೆ- ಗುಬ್ಬಿ, ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ತಾಲೂಕುಗಳಿಗೆ 76 ಲಕ್ಷ ರೂ., ಬಳ್ಳಾರಿ ಜಿಲ್ಲೆ-ಬಳ್ಳಾರಿ, ಸಂಡೂರು ತಾಲೂಕುಗಳಿಗೆ 1.86 ಕೋಟಿ ರೂ., ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಮತ್ತು ಮೊಳಕಾಲೂರು ತಾಲೂಕುಗಳಿಗೆ 1.36 ಕೋಟಿ ರೂ. ಮತ್ತು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿಗೆ 56 ಲಕ್ಷ ರೂ. ಅನುದಾನ ನೀಡಲಾಗಿದೆ.
2025-26ನೇ ಸಾಲಿನಲ್ಲಿ ಆಯವ್ಯಯ ಘೋಷಣೆಯಂತೆ 14 ವರ್ಷದ ಹೆಣ್ಣು ಮಕ್ಕಳಿಗೆ ಹೆಚ್ಪಿವಿ ಸೋಂಕಿನಿಂದ ರಕ್ಷಣೆ ನೀಡಲು ಮತ್ತು ಸಂಭಾವ್ಯ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಗಣಿಬಾಧಿತ 4 ಜಿಲ್ಲೆಗಳ 10 ತಾಲೂಕುಗಳಲ್ಲಿ KMERC ಅನುಮೋದಿಸಿರುವ 4.54 ಕೋಟಿ ರೂ.ಗಳ ಅನುದಾನದಲ್ಲಿ ಚುಚ್ಚು ಮದ್ದು ಕಾರ್ಯಕ್ರಮವನ್ನು ಕೈಗೊಳ್ಳಲು ಪರಿಷ್ಕೃತ ಅನುಮೋದನೆ ನೀಡಲಾಗಿದೆ.