ಮೈಸೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಈ ಯೋಜನೆಗಳಿಗೆ ಬಿಜೆಪಿ ವಿರೋಧ ಮಾಡಿದ್ದು, ಆದರೆ ಬಳಿಕ ಕೆಲವು ರಾಜ್ಯಗಳಲ್ಲಿ ಪ್ರಧಾನಿ ಮೋದಿ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಜನರನ್ನು ಆಕರ್ಷಿಸಿದ್ದಾರೆ. ನಮ್ಮದೇ ಕಾಪಿ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದು ಈ ಒಂದು ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾತನಾಡಿದರು. ಈ ಹಸ್ತ ವಿರೋಧಿಗಳ ಟೀಕೆಯ ಬಾಯಿ ಮುಚ್ಚಿಸಿದೆ. ಕಮಲ ಕೆರೆಯಲ್ಲಿ ಇದ್ದರೆ ಚಂದ, ತೆನೆ ಹೊಲದಲ್ಲಿ ಇದ್ದರೆ ಚಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚಂದ ಎಂದು ನಾನು ಈ ಹಿಂದೆ ಹೇಳಿದ್ದೆ. ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಪ್ರಧಾನಿ ಮೋದಿ ಟೀಕೆ ಮಾಡುತ್ತಿದ್ದರು. ಈಗ ಎಲ್ಲಾ ರಾಜ್ಯಗಳಲ್ಲೂ ಗ್ಯಾರಂಟಿ ಯೋಜನೆ ಪ್ರಕಟಿಸುತ್ತಿದ್ದಾರೆ ಎಂದು ಮೋದಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.