ದಾವಣಗೆರೆ: ಐಎಎಸ್, ಕೆಎಎಸ್ ಸೇರಿದಂತೆ ಬ್ಯಾಂಕಿಂಗ್, ಪಿ.ಎಸ್.ಐ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ದಾವಣಗೆರೆಯಲ್ಲಿಯೇ ಸಂಕಲ್ಪ ಕೇಂದ್ರದಲ್ಲಿ ನುರಿತ, ಸಂಪನ್ಮೂಲ ವ್ಯಕ್ತಿಗಳಿಂದ ಉಚಿತ ಕೋಚಿಂಗ್ ಸಿಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾ ಆಡಳಿತ, ದಾವಣಗೆರೆ ವಿ.ವಿ ಹಾಗೂ ಎಸ್.ಎಸ್.ಕೇರ್ ಟ್ರಸ್ಟ್ ಮತ್ತು ಐಎಎಸ್ ಬಾಬಾ ಕೋಚಿಂಗ್ ಕೇಂದ್ರದ ಸಹಯೋಗದಲ್ಲಿ ವಿದ್ಯಾನಗರ ರಸ್ತೆಯಲ್ಲಿನ ದೃಶ್ಯಕಲಾ ಕಾಲೇಜು ಆವಣರಲ್ಲಿ ಆರಂಭಿಸಲಾದ ಸಂಕಲ್ಪ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಸ್ಪರ್ಧಾತ್ಮಕ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಬೇಕು, ಈ ಮೂಲಕ ಜಿಲ್ಲೆಯ ಪ್ರತಿಭಾನ್ವಿತ ಯುವ ವಿದ್ಯಾವಂತರಿಗೆ ಅಖಿಲ ಭಾರತ ಮಟ್ಟದ ನಾಗರಿಕ ಸೇವಾ ಹಾಗೂ ಇತರೆ ಹುದ್ದೆಗಳ ಪರೀಕ್ಷೆ ತೆಗೆದುಕೊಂಡು ಉನ್ನತ ಹುದ್ದೆಗಳಿಗೆ ಜಿಲ್ಲೆಯವರು ಹೋಗಬೇಕೆಂಬ ಕನಸಿನೊಂದಿಗೆ ಸಂಕಲ್ಪ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಇಲ್ಲಿ ಖ್ಯಾತ ಐಎಎಸ್‍ಬಾಬಾ ಕೋಚಿಂಗ್ ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಂಕಲ್ಪ ಕೋಚಿಂಗ್ ಕೇಂದ್ರ ಆರಂಭಿಸಲಾಗುತ್ತಿದೆ. ಕೋಚಿಂಗ್ ಕೇಂದ್ರಕ್ಕೆ ಎಸ್.ಎಸ್.ಕೇರ್ ಟ್ರಸ್ಟ್‍ನಿಂದ ವೆಚ್ಚವನ್ನು ಭರಿಸಿ ಜಿಲ್ಲೆಯ ಅಭ್ಯರ್ಥಿಗಳಿಗೆ ಉಚಿತವಾಗಿ ಕೋಚಿಂಗ್ ನೀಡಲಾಗುತ್ತದೆ ಎಂದರು.
ಸಂಕಲ್ಪ ಕೇಂದ್ರದಲ್ಲಿ ಉಚಿತ ಕೋಚಿಂಗ್‍ಗೆ ಪ್ರವೇಶ ಪಡೆಯಲು ಜುಲೈ 24 ರೊಳಗಾಗಿ www.IASbaba.com ಮೂಲಕ ಗೂಗಲ್ ಫಾರಂ ಮೂಲಕ ನೊಂದಣಿ ಮಾಡಬೇಕು. ನೊಂದಣಿಯಾದವರಿಗೆ ಜುಲೈ 29 ರಂದು ಲಿಖಿತ ಪರೀಕ್ಷೆಯನ್ನು ದಾವಣಗೆರೆಯಲ್ಲಿ ನಡೆಸಲಾಗುತ್ತದೆ. ಎರಡು ದಿನಗಳಲ್ಲಿ ಫಲಿತಾಂಶ ಪ್ರಕಟಿಸಿ ತರಬೇತಿಗೆ 300 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ತರಗತಿಗಳು ಆಗಸ್ಟ್ 4 ರಿಂದ ಪ್ರಾರಂಭವಾಗಲಿವೆ ಎಂದರು.
ಜಿಲ್ಲೆಯಲ್ಲಿ ಸುಸಜ್ಜಿತ ಕೋಚಿಂಗ್ ಕೇಂದ್ರ, ಐಟಿ,ಬಿಟಿ ವಲಯಗಳ ಸ್ಥಾಪನೆಯೊಂದಿಗೆ ಇಲ್ಲಿನ ಯುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸಬೇಕೆಂಬ ಆಕಾಂಕ್ಷೆಯೊಂದಿಗೆ 2023 ರಲ್ಲಿ ಯುವಕರ ಜೊತೆಗೆ ಚರ್ಚೆ ಮಾಡಿದಾಗ ಅನೇಕರು ಸ್ಪರ್ಧಾತ್ಮಕ ಪರೀಕ್ಷೆಯ ಅಗತ್ಯದ ಬಗ್ಗೆ ಮನವಿ ಮಾಡಿದರು. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಸ್.ಎಸ್.ಕೇರ್ ಟ್ರಸ್ಟ್ ಈ ಬಗ್ಗೆ ಆಲೋಚನೆ ಮಾಡಿತು. ‘ಕೌಶಲ್ಯ’, ‘ಸಕ್ಷಮ’ ಎಂಬ ಕಾರ್ಯಕ್ರಮ ಕೂಡ ಮಾಡಿದೆವು. ಸಿಇಟಿ, ನೀಟ್ ಪರೀಕ್ಷೆ ತರಬೇತಿ ಕೂಡ ನೀಡಿದೆವು. ಹಲವು ವಿದ್ಯಾರ್ಥಿಗಳಿಗೆ ಇದು ಅನುಕೂಲ ಆಯಿತು.
ಸಾವಿರಾರು ಪದವೀಧರರು ಜಿಲ್ಲೆಯ ಕಾಲೇಜುಗಳಿಂದ ಪ್ರತಿ ವರ್ಷ ಹೊರ ಬರುತ್ತಿದ್ದಾರೆ. ಇವರಲ್ಲಿ ಬಹುತೇಕರು ಉದ್ಯೋಗ ಅರಸಿ ಬೆಂಗಳೂರಿಗೆ ತೆರಳುತ್ತಿದ್ದಾರೆ. ಹೀಗಾಗಿ, ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ತೆರೆಯುವ ನಿರ್ಧಾರ ಮಾಡಲಾಗಿದೆ. ಜೊತೆಗೆ ಐಟಿ ಕಂಪನಿಗಳು ಕೂಡ ದಾವಣಗೆರೆಗೆ ಬರಲಿವೆ. ಹಲವು ಜನರ ನಿರೀಕ್ಷೆ ಕೂಡ ಇದೆ. ಎಸ್.ಟಿ.ಪಿ.ಐ ಕೇಂದ್ರ ಇಲ್ಲಿದೆ. ಆರು ಕೇಂದ್ರದಲ್ಲಿ 60 ಜನರಿಗೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಎರಡು ಎಕರೆ ಭೂಮಿ ಕೇಳಿದ್ದಾರೆ. ಹತ್ತು ಎಕರೆ ಭೂಮಿ ನೀಡಲು ಸಿದ್ಧ ಇದ್ದೇವೆ. ಸ್ಮಾರ್ಟ್ ಸಿಟಿ ಯೋಜನೆಯ ಕಟ್ಟಡ ಬಳಕೆ ಮಾಡಿಕೊಳ್ಳಲು ಕೂಡ ಅವಕಾಶವಿದೆ. ಐಟಿ, ಬಿಟಿ ಕಂಪನಿಗೆ 10 ರಿಂದ 30 ಎಕರೆ ಭೂಮಿಗೆ ಹುಡುಕಾಟ ನಡೆದಿದೆ. ಇದಕ್ಕೆ ಪೂರಕವಾಗಿ ಬ್ರಾಂಡ್ ದಾವಣಗೆರೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಈ ವರ್ಷವೇ ಐಟಿ, ಬಿಟಿ ಕಂಪನಿ ತರುತ್ತೇವೆ. ಬಹಳ ಹಿಂದೆಯೇ ವಿಮಾನ ನಿಲ್ದಾಣ ನಿರ್ಮಾಣ ಆಗಿದ್ದರೆ ಅನುಕೂಲ ಆಗುತ್ತಿತ್ತು ಎಂದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ ಗ್ರಂಥಾಲಯದಲ್ಲಿ ಮಕ್ಕಳು ನೆಲದ ಮೇಲೆ ಕುಳಿತು ಓದುವುದನ್ನು ಗಮನಿಸಿ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಒಲವು ಮೂಡಿತು. ಆಗ ಪರಿಶೀಲನೆ ಮಾಡಿದಾಗ ಲಲಿತಕಲಾ ಕಾಲೇಜು ಆವರಣದಲ್ಲಿ ಸ್ಥಳಾವಕಾಶ ಲಭ್ಯ ಆಯಿತು. ಹೈಸ್ಕೂಲ್ ಮೈದಾನದಲ್ಲಿದ್ದ ಬಸ್ ನಿಲ್ದಾಣ ತೆರವು ಮಾಡಿದ ವಸ್ತು ಬಳಸಿ ಈ ಕಟ್ಟಡದ ನಿರ್ಮಾಣ ಮಾಡಿದ್ದೇವೆ. ಡಿಎಂಎಫ್ ನಿಧಿಯಲ್ಲಿ ರೂ.80 ಲಕ್ಷ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದಾರೆ ಎಂದರು.
ಕೋಚಿಂಗ್ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಉಚಿತವಾಗಿ ನೀಡಲಾಗುವುದು, ಇದಕ್ಕಾಗಿ ಗ್ರಂಥಾಲಯ ತೆರೆದು ಇದಕ್ಕೆ ಬೇಕಾದ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತದೆ. ತರಬೇತಿ ಕೇಂದ್ರವು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಪೊಲೀಸ್ ಅಧೀಕ್ಷಕರ ಉಸ್ತುವಾರಿಯಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳ ಬಳಕೆ ಮಾಡಿಕೊಂಡು ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು.
ಹಾಸ್ಟೆಲ್ ಸಮಸ್ಯೆ ಕೂಡ ಬಗೆಹರಿಸುತ್ತೇವೆ, ಪಕ್ಕದ ಜಿಲ್ಲೆ ಯಿಂದ ಕೂಡ ಬರಬಹುದು. ಇವರಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಲಿದ್ದೇವೆ. ಪಿಎಸ್‍ಐ, ಕೆಎಎಸ್, ಐಎಎಸ್, ಬ್ಯಾಂಕ್, ರೈಲ್ವೆ ಪರೀಕ್ಷಾ ತರಬೇತಿ ಕೂಡ ನೀಡಲಿದ್ದೇವೆ. ಅಭ್ಯರ್ಥಿಗಳ ಆಸಕ್ತಿ ನೋಡಿ ತರಬೇತಿ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಕೋಚಿಂಗ್ ಹೋದರೆ ತಿಂಗಳಿಗೆ 25 ಸಾವಿರ ವೆಚ್ಚ ಆಗಲಿದೆ. ವರ್ಷಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಆಗಲಿದೆ. ಇದರಿಂದ ಬಡ ಪ್ರತಿಭಾನ್ವಿತರು ಹೋಗಲು ಸಾಧ್ಯವಾಗದಿರುವುದರಿಂದ ಇದು ದಾವಣಗೆರೆ ಜನರಿಗೆ ಇಲ್ಲಿ ಉಚಿತವಾಗಿ ಲಭ್ಯ ಆಗುತ್ತ್ತದೆ. ಗಂಭೀರವಾಗಿ ಓದುವ ಗುರಿಯೊಂದಿಗೆ ಆಗಮಿಸುವ ಅಭ್ಯರ್ಥಿಗಳಿಗೆ ಇಲ್ಲಿ ಅವಕಾಶ ನೀಡಲಾಗುತ್ತದೆ, ಮೊದಲ ಆದ್ಯತೆ ದಾವಣಗೆರೆ ಜಿಲ್ಲೆಯ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ ಎಂದರು.
ಐಟಿ ಕಂಪನಿಗಳಿಗೆ ಕರೆತರಲು ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಜಾಗ ಕೂಡ ಪರಿಶೀಲನೆ ಮಾಡಿದ್ದೇವೆ. ಇದಕ್ಕೆ ಪೂರಕ ಪ್ರಯತ್ನ ಮಾಡುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಬೃಹತ್ ಸಮ್ಮೇಳನವನ್ನು ನಡೆಸಲಾಗುತ್ತದೆ ಎಂದರು.
ಐಎಎಸ್ ಬಾಬಾ ಕೋಚಿಂಗ್ ಸಂಸ್ಥೆಯ ಮೋಹನ್ ಮಾತನಾಡಿ ಸಾಧನೆಗೆ ಇದೊಂದು ದೊಡ್ಡ ಅವಕಾಶ ನೀಡಲಿದೆ. ಪ್ರತಿಭೆ ಇದ್ದರೂ ಅವಕಾಶ ಸಿಗುವುದಿಲ್ಲ. ಇಂತಹ ಅವಕಾಶ ಇಲ್ಲಿ ಸಿಗಲಿದೆ. ಸಾಧನೆಯ ಜೊತೆಗೆ ದೃಢವಾದ ನಿಲುವು ಇರಬೇಕು. ಕೇಂದ್ರದಲ್ಲಿ 300 ವಿದ್ಯಾರ್ಥಿಗಳ ಆಯ್ಕೆ ಮಾಡಲಾಗುತ್ತದೆ ಎಂದರು.
ದಾವಣಗೆರೆ ವಿ.ವಿ ಕುಲಪತಿಗಳಾದ ಪೆÇ್ರ.ಬಿ.ಡಿ.ಕುಂಬಾರ ಮಾತನಾಡಿ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಇದೊಂದು ಮೈಲುಗಲ್ಲು. ರಾಜ್ಯದ ಯಾವ ವಿಶ್ವವಿದ್ಯಾಲಯದಲ್ಲಿ ಇಂತಹ ತರಬೇತಿ ಸಂಸ್ಥೆ ಇಲ್ಲ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) ರೂಪಿಸಿದ ಸಂಸ್ಥೆ ಇದಾಗಿದೆ. ವಿಶ್ವವಿದ್ಯಾಲಯಗಳು ಪದವಿ ನೀಡಲಿವೆ ಆದರೆ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಯಾವ ವಿಶ್ವವಿದ್ಯಾಲಯ ನೀಡುತ್ತಿಲ್ಲ. ಉದ್ಯೋಗಕ್ಕೆ ಇದರಿಂದ ಅನುಕೂಲ ಆಗಲಿದೆ.
ಕೇಂದ್ರದಲ್ಲಿ ವಿಶ್ವವಿದ್ಯಾಲಯದ ನುರಿತ ಪ್ರಾಧ್ಯಾಪಕರು ಇಲ್ಲಿ ತರಬೇತಿ ನೀಡಲಿದ್ದಾರೆ. ನಿವೃತ್ತ ಪ್ರಾಧ್ಯಾಪಕರ ಸೇವೆಯನ್ನೂ ಬಳಸಿಕೊಳ್ಳುವ ಉದ್ದೇಶ ಇದೆ. ಮುಂದಿನ ಮೂರು ವರ್ಷಗಳಲ್ಲಿ ಉತ್ತಮ ಫಲಿತಾಂಶ ನೀಡಲಿದೆ ಎಂಬ ಭರವಸೆ ಇದೆ ಎಂದರು.
ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಹೈಮಾಸ್ಟ್ ದೀಪ ಮತ್ತು ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಡಿ ರೂ.12 ಲಕ್ಷದಲ್ಲಿ ನಿರ್ಮಾಣ ಮಾಡಿದ ಶೌಚಾಲಯದ ಉದ್ಘಾಟನೆ ನೆರವೇರಿಸಿದರು.