ತುಮಕೂರು : ಜಿಲ್ಲೆಯ ಹಲವು ಕಡೆ “ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಹೋಲುವ ಪುಸ್ತಕಗಳ ಮಾರಾಟ ” ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಭಗವದ್ಗೀತೆ ಪುಸ್ತಕ ಹಂಚಿಕೆ ನೆಪದಲ್ಲಿ ಮತಾಂತರ ಮಾಡ್ತಿದ್ದಾರೆ ಎಂಬ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.
ತುಮಕೂರಿನಲ್ಲಿ ಭಗವದ್ಗೀತೆ ಪುಸ್ತಕ ಹೋಲುವ ಗೀತೆಯೇ ನಿನ್ನ ಜ್ಞಾನ ಅಮೃತ ಎಂಬ ಪುಸ್ತಕಗಳ ಮಾರಾಟ ಹೆಚ್ಚಾಗಿದೆ. 98 ರೂಪಾಯಿ ದರದ ಪುಸ್ತಕವನ್ನು ಕೇವಲ 30ರೂಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಕೆಲವು ಕಡೆ ಉಚಿತವಾಗಿ ಪುಸ್ತಕ ಕೊಟ್ಟು ಮತಾಂತರಕ್ಕೆ ಸಂಚು ಮಾಡಲಾಗುತ್ತಿದೆ.
ಇನ್ನು ಈ ಪುಸ್ತಕದಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ. ತುಮಕೂರಿನ ಕೋಟೆ ಆಂಜನೇಯ ದೇವಸ್ಥಾನ ಹಾಗೂ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಪುಸ್ತಕಗಳನ್ನು ಜನರಿಗೆ ಹಂಚಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ
ಗೀತೆಯೇ ನಿನ್ನ ಜ್ಞಾನ ಅಮೃತ, ಎಂಬ ಪುಸ್ತಕದಲ್ಲಿ ಹಿಂದೂ ಧರ್ಮದ ಬಗ್ಗೆ ಹಾಗೂ ದೇವರುಗಳ ಬಗ್ಗೆ ಅವಹೇಳನಕಾರಿ ಬರಹವಿದೆ. ಹಿಂದೂ ಧರ್ಮದ ಬಗ್ಗೆ ಜನರಿಗೆ ಕೆಟ್ಟ ಮನಸ್ಥಿತಿ ಬರುವಂತೆ ಬರಹ ಬರೆದು ಪುಸ್ತಕ ಹಂಚಿಕೆ ಮಾಡಿದ್ದಾರೆ. ಹೊರರಾಜ್ಯದಿಂದ ತುಮಕೂರು ನಗರಕ್ಕೆ ಬಂದು ಪುಸ್ತಕಗಳ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ಪುಸ್ತಕಗಳು ನವದೆಹಲಿಯ ಕಬೀರ್ ಪ್ರಿಂಟರ್ಸ್ ಮುದ್ರಣಾಲಯದಿಂದ ಮುದ್ರಿತಾವಾಗಿರುವ ಪುಸ್ತಕಗಳಾಗಿವೆ. ಹಿಂದೂಗಳು ಇರುವ ಏರಿಯಾಗಳಿಗೆ ಹೋಗಿ ಇಡೀ ತುಮಕೂರಿನಲ್ಲಿ ಪುಸ್ತಕಗಳ ಹಂಚಿಕೆಯಾಗುತ್ತಿದೆ. ಸದ್ಯ ಈ ಬಗ್ಗೆ ಭಜರಂಗದಳ ಕಾರ್ಯಕರ್ತರು ಪುಸ್ತಕ ಮಾರಾಟ ಮಾಡ್ತಿದ್ದವರ ವಿರುದ್ಧ ದೂರು ದಾಖಲಿಸಿದ್ದಾರೆ.
ತುಮಕೂರು ನಗರ ಹಾಗೂ ಕೋರಾ ಪೊಲೀಸ್ ಠಾಣೆ ಸೇರಿದಂತೆ ತುಮಕೂರಿನ ಎರಡು ಠಾಣೆಗಳಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಹಾಗೂ ಭಜರಂಗದಳದ ಕಾರ್ಯಕರ್ತರು ತುಮಕೂರು ಎಸ್ಪಿಗೆ ದೂರು ನೀಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಪುಸ್ತಕಗಳನ್ನ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.