ಬೆಂಗಳೂರು : ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಸುವ ಗಡುವು ಮುಗಿದಿದ್ದು, ಇಂದಿನಿಂದ ಕ್ರಮ ಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ. ಫೆಬ್ರವರಿ 28 ರಂದು ಹೊರಡಿಸಿದ್ದ ಸುತ್ತೋಲೆಯಂತೆಯೇ ಶೇ 60ರಷ್ಟು ಕನ್ನಡ ಬಳಸದ ವಾಣಿಜ್ಯ ಮಳಿಗೆಗಳ ʼವ್ಯಾಪಾರ ಪರವಾನಗಿʼ ಅಮಾನತು ಮಾಡಿ, ಬೀಗ ಹಾಕಲಾಗುತ್ತದೆ.

ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ವಿಧೇಯಕ-2024 ರ ತಿದ್ದುಪಡಿಯನ್ವಯ ನಾಮಫಲಕದ ಮೇಲ್ಬಾಗದಲ್ಲಿ ಶೇ 60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿದ್ದು, ರಾಜ್ಯದಲ್ಲಿನ ಎಲ್ಲಾ ಉದ್ದಿಮೆಗಳು, ಕಾರ್ಖಾನೆಗಳು, ಬ್ಯಾಂಕ್‍ಗಳು, ಸಂಘ, ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು, ಶಾಲಾ, ಕಾಲೇಜುಗಳ ನಾಮಫಲಕದಲ್ಲಿ ಕಡ್ಡಾಯವಾಗಿ ಶೇ 60 ರಷ್ಟು ಕನ್ನಡ ಭಾಷೆಯ ಪ್ರದರ್ಶನ ಇರಲೇಬೇಕಾಗುತ್ತದೆ.

ಕನ್ನಡವನ್ನು ಸಮರ್ಪಕವಾಗಿ ಅನುಷ್ಠಾನ ಮಾಡದಿದ್ದಲ್ಲಿ 5 ಸಾವಿರದಿಂದ 10 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ. ರಾಜ್ಯದ ಆಡಳಿತ ಭಾಷೆ ಕನ್ನಡವಾಗಿರುವುದರಿಂದ ಎಲ್ಲರೂ ಸ್ವಯಂ ಪ್ರೇರಿತವಾಗಿ ಕನ್ನಡ ಬಳಕೆ ಮಾಡಬೇಕು. ಒಂದು ವೇಳೆ ಸಂಪೂರ್ಣವಾಗಿ ಕನ್ನಡ ಬಳಕೆ ಮಾಡುವುದಾದರೇ ಯಾವುದೇ ಅಭ್ಯಂತರ ಇರುವುದಿಲ್ಲ. ಬ್ಯಾಂಕ್, ಉದ್ದಿಮೆಗಳು ತ್ರಿಭಾಷಾ ಸೂತ್ರ ಪಾಲನೆ ಮಾಡುತ್ತಿದ್ದಲ್ಲಿ ಮೊದಲ ಸಾಲಿನಲ್ಲಿ ಕನ್ನಡ ಭಾಷೆ ಇರಬೇಕು ಎಂದು ಸೂಚನೆ ನೀಡಲಾಗಿದೆ.

Share.
Exit mobile version