ಬೆಂಗಳೂರು : ಕಳೆದ ಎರಡು ತಿಂಗಳ ಹಿಂದೆ ದುಬೈ ನಿಂದ 14 ಕೋಟಿಗೂ ಅಧಿಕ ಮೌಲ್ಯದ ಚಿನ್ನ ಸಾಗಾಣಿ ಪ್ರಕರಣದಲ್ಲಿ ನಟಿ ರನ್ಯಾರಾವ್ ಸದ್ಯ ಜೈಲಿನಲ್ಲಿದ್ದಾರೆ. ಇದೀಗ ಅದೇ ಮಾದರಿಯಲ್ಲಿ ನಿಯತಕಾಲಿಕ ಪುಸ್ತಕದ ಮುಖಪುಟದಲ್ಲಿ ಮರೆಮಾಚಿ ಮಾದಕ ವಸ್ತು ಕೊಕೇನ್ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯಿಂದ 40 ಕೋಟಿ ರೂ. ಮೌಲ್ಯದ 4 ಕೆ.ಜಿ ಕೊಕೇನ್ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜುಲೈ 18ರ ಮುಂಜಾನೆ ದೋಹಾದಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನ ಮೇಲೆ ಅನುಮಾನದ ಮೇಲೆ ಡಿಆರ್ಐ ಬೆಂಗಳೂರು ಘಟಕದ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಆತನ ಬಳಿ ಇದ್ದ ಕಾಮಿಕ್ಸ್ ನಿಯತಕಾಲಿಕ ಪುಸ್ತಕವು ಅಸಹಜವಾಗಿ ಕಂಡು ಬಂದಿದೆ. ಪುಸ್ತಕದ ಮುಖಪುಟದಲ್ಲಿ ಬಿಳಿ ಪುಡಿಯನ್ನು ಮರೆಮಾಚಿ ಇಟ್ಟಿರುವುದು ಕಂಡು ಬಂದಿದೆ. ಪುಡಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊಕೇನ್ ಎಂದು ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.