ಪ್ರಧಾನಿ ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಉದ್ಘಾಟನೆ ನೆರವೇರಿಸಿದ ಕೆಲವು ಗಂಟೆಗಳ ನಂತರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಡಿಯೋ ಸಂದೇಶ ಪ್ರಕಟಿಸಿದ್ದು, ಧಾರ್ಮಿಕ ಕಾರ್ಯಕ್ರಮವನ್ನು ದೇಶದ ಕಾರ್ಯಕ್ರಮವನ್ನಾಗಿ ಆಚರಿಸಿರುವುದಕ್ಕಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ಸಂವಿಧಾನದಲ್ಲಿ ಉನ್ನತ ಸ್ಥಾನ ಹೊಂದಿರುವವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ದೂರವುಳಿದು ನಮ್ಮ ಜಾತ್ಯತೀತ ರಾಷ್ಟ್ರ ಮೌಲ್ಯಗಳಿಗೆ ಬದ್ಧರಾಗಿರಬೇಕು. ಜಾತ್ಯತೀತತೆ ನಮ್ಮ ದೇಶದ ಆತ್ಮವಾಗಿದೆ. ಭಾರತದ ಮೊದಲ ಪ್ರಧಾನಿ ಜವಹರ್‌ ಲಾಲ್ ನೆಹರು ಕೂಡ ಭಾರತದ ಜಾತ್ಯತೀತತೆ ಎಂದರೆ ಧರ್ಮ ಹಾಗೂ ಆಡಳಿತದಿಂದ ಅಂತರ ಕಾಯ್ದುಕೊಂಡಿರಬೇಕು ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಧರ್ಮ ಹಾಗೂ ಆಡಳಿತದ ನಡುವಿನ ಅಂತರ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ಧಾರ್ಮಿಕ ಸಮಾರಂಭವನ್ನು ರಾಷ್ಟ್ರದ ಅಧಿಕೃತ ಕಾರ್ಯಕ್ರಮವಾಗಿ ಆಚರಿಸುವ ಹಂತಕ್ಕೆ ನಾವು ತಲುಪಿದ್ದೇವೆ. ಆ ಸಮಾರಂಭದಲ್ಲಿ ಭಾಗವಹಿಸುವ ಆಹ್ವಾನವನ್ನು ನಿರಾಕರಿಸುವ ಮೂಲಕ, ಭಾರತದ ಜಾತ್ಯತೀತ ಸ್ವರೂಪಕ್ಕೆ ನಮ್ಮ ಬದ್ಧತೆಯನ್ನು ಗಟ್ಟಿಗೊಳಿಸಿದ್ದೇವೆ ಎಂದು ಪಿಣರಾಯಿ ವಿಜಯನ್ ಹೇಳಿದರು.

ಈ ಸಂದರ್ಭದಲ್ಲಿ ನಾವು ಒಂದು ಧರ್ಮವನ್ನು ವೈಭವೀಕರಿಸಿ ಇತರ ಧರ್ಮಗಳನ್ನು ಕೀಳಾಗಿ ಕಾಣಬಾರದು. ಇತರ ಧರ್ಮಗಳು ಹಾಗೂ ನಂಬಿಕೆಯನ್ನು ಆಚರಿಸುವವರು ಕೂಡ ನಮ್ಮ ಸ್ವತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಈ ದೇಶ ಎಲ್ಲ ಜನ ಸಮಾಜದ ಎಲ್ಲ ಪಂಗಡಗಳ ಜನರಿಗೆ ಸೇರಿದೆ. ಎಲ್ಲರನ್ನು ಸಮಾನವಾಗಿ ಪರಿಗಣಿಸಬೇಕು. ಧರ್ಮವು ಖಾಸಗಿ ವಿಷಯ. ಸಂವಿಧಾನ ಕೂಡ ಎಲ್ಲ ವ್ಯಕ್ತಿಗಳು ಅವರ ಆತ್ಮಸಾಕ್ಷಿಯ ಅನುಗುಣವಾಗಿ ಯಾವುದೇ ಧರ್ಮವನ್ನು ಮುಕ್ತವಾಗಿ ಆಚರಣೆ ಮಾಡುವ, ಪ್ರಚಾರ ಮಾಡುವ ಹಕ್ಕನ್ನು ಹೊಂದಿದೆ ಎಂದು ಹೇಳುತ್ತದೆ. ಧರ್ಮ, ಭಾಷೆ ಮತ್ತು ಪ್ರಾದೇಶಿಕ ಅಥವಾ ವಿಭಾಗೀಯ ವೈವಿಧ್ಯತೆಗಳನ್ನು ಮೀರಿ ಭಾರತದ ಎಲ್ಲ ಜನರಲ್ಲಿ ಸಾಮರಸ್ಯ ಮತ್ತು ಸಮಾನ ಸಹೋದರತ್ವದ ಮನೋಭಾವವನ್ನು ಉತ್ತೇಜಿಸಲು ಪಿಣರಾಯಿ ವಿಜಯನ್ ಕರೆ ನೀಡಿದರು. ಅಯೋಧ್ಯೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಲು ನನಗೆ ಆಹ್ವಾನ ಬಂದಿತ್ತು. ಆಹ್ವಾನವನ್ನು ಸ್ವೀಕರಿಸದೆ ಸಾಂವಿಧಾನಿಕ ಜವಾಬ್ದಾರಿಯನ್ನು ಎತ್ತಿಹಿಡಿದಿದ್ದೇವೆ. ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ವಿಚಾರಣೆ ಮತ್ತು ಸುಧಾರಣೆಯ ಮನೋಭಾವವನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತವು ಮತ್ತಷ್ಟು ಏಳಿಗೆಯಾಗಲಿ” ಎಂದು ಜನತೆಗೆ ಕೇರಳ ಸಿಎಂ ಕರೆ ನೀಡಿದರಾಗಿದೆ.

Share.
Exit mobile version