ನೆಲ, ಜಲಕ್ಕಾಗಿ ಪ್ರತಿಭಟಿಸದ ಕರಾವಳಿಗರು ಕಂಬಳಕ್ಕಾಗಿ ಹೋರಾಡುತ್ತಾರಾ?


Tuesday, January 24th, 2017 7:03 pm

ಲೇಖನ:ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಭರ್ಜರಿಯಾಗಿ ಸುದ್ದಿಯಲ್ಲಿದೆ. ಸೂಕ್ತ ಸಮಯದಲ್ಲಿ ಅಲ್ಲಿನ ಜನರು, ರಾಜಕಾರಣಿ ಮತ್ತಿತರರೆಲ್ಲಾ ರಸ್ತೆಗಳಿದು ಹೋರಾಡಿ, ಸರಕಾರಗಳಿಗೂ ಸುಪ್ರೀಂ ಕೋರ್ಟಿಗೂ ಬಿಸಿ ಮುಟ್ಟಿಸಿ ನಿಷೇಧಕ್ಕೊಳಗಾಗಿದ್ದ ಜಲ್ಲಿಕಟ್ಟು ಕ್ರೀಡೆಗೆ ಮರು ಜೀವ ನೀಡುವ ಪ್ರಕ್ರಿಯೆಯನ್ನು ರಾಜಾರೋಷವಾಗಿ ನಡೆಸಲು ಕಾರಣರಾದರು. ನಿಷೇಧವನ್ನು ತೆರವುಗೊಳಿಸಬೇಕಾದ ಅನಿವಾರ್ಯತೆಗೆ ಈ ಹೋರಾಟ ಆಡಳಿತವನ್ನು ಸಿಲುಕಿಸಿತು.

ಇದೀಗ ಅದರ ಪ್ರೇರಣೆಯಿಂದ ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳದ ಮೇಲೆ ಹೇರಲಾದ ನಿಷೇಧವನ್ನೂ ಇದೇ ರೀತಿ ಹೋರಾಡಿ ತೆರವುಗೊಳಿಸುವ ಉತ್ಸಾಹದ, ರಣೋತ್ಸಾಹದ ಮಾತುಗಳು ಕೇಳಿ ಬರುತ್ತಿವೆ.

ಒಳ್ಳೆಯದೇ! ಆದರೆ, ವಾಸ್ತವವನ್ನೊಮ್ಮೆ ಅರಿಯುವ ಅವಶ್ಯಕತೆಯಿದೆ. ಹಾಗಾಗಿ ದಕ್ಷಿಣ ಕನ್ನಡದ ಕಡೆಗೊಮ್ಮೆ ಕಣ್ಣು ಹಾಯಿಸಿ ಅಲ್ಲಿನ ನೈಜ ಪರಿಸ್ಥಿತಿ ತಿಳಿಯೋಣ.

ಕರ್ನಾಟಕದಲ್ಲಿ ಕಳೆದ ಹಲವು ದಶಕಗಳಿಂದ ಕಾವೇರಿ ವಿಚಾರದಲ್ಲಿ ನಡೆದ ಗಲಾಟೆ, ಬಂದ್, ಗಲಭೆ, ದೊಂಬಿ, ಪ್ರತಿಭಟನೆ, ವಿರೋಧಗಳಿಗೆ ಲೆಕ್ಕವೇ ಇಲ್ಲ. ತಮಿಳುನಾಡಿನ ರಗಳೆ ಮತ್ತು ಸುಪ್ರೀಂ ಕೋರ್ಟ್, ಟ್ರಿಬ್ಯುನಲ್‍ಗಳಲ್ಲಿ ಕನ್ನಡ ನಾಡಿಗೆ ಹಿನ್ನಡೆಯಾದಾಗಲೆಲ್ಲಾ ಕರ್ನಾಟಕದ ಸರಕಾರ, ರಾಜಕೀಯ ಪಕ್ಷಗಳು, ಜನರು ಮತ್ತು ರೈತರು ಕಂಗಾಲಾಗಿದ್ದು ಮತ್ತದರ ನಂತರದ ಬೆಳವಣಿಗೆಗಳು ಎಲ್ಲರಿಗೆ ತಿಳಿದಿರುವಂಥದ್ದೇ. ಇಂತಹ ಸಂದರ್ಭಗಳಲ್ಲೆಲ್ಲಾ ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳೂ ನಡೆದಿವೆ. ರಸ್ತೆ ತಡೆ, ಬಂದ್ ನಡೆದು ಜನಜೀವನ ಸ್ತಬ್ದವಾಗಿದ್ದೂ ಇದೆ.

ಇದು ಸಹಜ ಪ್ರತಿಕ್ರಿಯೆ. ಎಲ್ಲಾ ಕಡೆ ನಡೆಯುವಂಥದ್ದೇ. ಇಡೀ ಕರ್ನಾಟಕ ರಾಜ್ಯ ಕಾವೇರಿ ವಿಚಾರದಲ್ಲಿ, ಪ್ರತ್ಯೇಕವಾಗಿ ರಾಜ್ಯದ ವಿರುದ್ಧ ಆದೇಶ ಬಂದಾಗ, ಅನ್ಯಾಯವಾದಗಲೆಲ್ಲಾ ಅಲ್ಲೋಲಕಲ್ಲೋಲಗೊಂಡಿರುವಾಗ ಒಂದು ಕಡೆಯ ಜನರು ಮಾತ್ರ ತಮಗದರ ಗೊಡವೆ, ಚಿಂತೆಯೇ ಇಲ್ಲವೆಂಬಂತೆ ನಿಶ್ಚಿಂತರಾಗಿರುತ್ತಾರೆ. ರಾಜ್ಯದಲ್ಲೆಲ್ಲಾ ಎಂಥಹದೇ ಗಲಾಟೆ, ಪ್ರತಿಭಟನೆ, ಬಂದ್ ನಡೆಯಲಿ ಅಲ್ಲಿ ಮಾತ್ರ ಅದ್ಯಾವುದೂ ಕಂಡು ಬರುವುದೇ ಇಲ್ಲ. ಜನಜೀವನ ತೀರಾ ಸಾಮಾನ್ಯವಾಗಿರುತ್ತದೆ. ಅವರಿಗೆ ಇದರ ಬಿಸಿ ತಟ್ಟಿರುವುದೇ ಇಲ್ಲ.

ಅದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ!

ಹೌದು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಪ್ರದೇಶ ಅಥವಾ ತುಳುನಾಡು ಎಂದೇ ಕರೆಯುವ, ಅತ್ಯಂತ ಸುಶಿಕ್ಷಿತ, ಸಮೃದ್ಧ, ಆರ್ಥಿಕವಾಗಿ ಬಲಿಷ್ಠವಾಗಿರುವ ಈ ಪ್ರದೇಶದಲ್ಲಿ ಕಾವೇರಿ ನೀರಿನ ವಿಚಾರದಲ್ಲಿ ಪ್ರತಿಭಟನೆ ಹೇಗೂ ನಡೆಯುವುದಿಲ್ಲ, ರಾಜಧಾನಿ ಬೆಂಗಳೂರು, ಮೈಸೂರು ಪ್ರದೇಶದಲ್ಲೆಲ್ಲಾ ಯಾವುದೇ ಗಲಾಟೆಯಾಗಲಿ ಅದಕ್ಕೆ ಸ್ಪಂದನೆಯೂ ಇರುವುದಿಲ್ಲ.

ಹಾಂ, ಇದು ಕೇವಲ ಕಾವೇರಿ ವಿಷಯಕ್ಕಾಗಿ ಮಾತ್ರವಲ್ಲ. ಪಟ್ಟಿ ತುಂಬಾ ಉದ್ದವಿದೆ.

ಕನ್ನಡದ ವರನಟ ಡಾ. ರಾಜ್‍ಕುಮಾರ್ ಅಪಹರಣ, ಕಳಸಾ ಬಂಡೂರಿ ವಿಚಾರ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ನಡೆಯುವ ಪ್ರತಿಭಟನೆ, ರಾಜ್ಯ ಬಂದ್, ರಾಜ್ಯದಾದ್ಯಂತ ನಡೆಯುವ ಸಾರಿಗೆ ಮುಷ್ಕರ ಮುಂತಾಗಿ ಬೇರೆ ಯಾವುದೇ ವಿಚಾರದಲ್ಲಿ ಇಡೀ ಕರ್ನಾಟಕ ರಾಜ್ಯದಾದ್ಯಂತ ಯಾವುದೇ ಪ್ರತಿಭಟನೆ, ಮುಷ್ಕರ, ಬಂದ್ ಅಥವಾ ಏನೇ ಗಲಾಟೆಯಿರಲಿ ಕನ್ನಡದ ಕರಾವಳಿ ಪ್ರದೇಶ ಮಾತ್ರ ನಿರ್ಲಿಪ್ತವಾಗಿರುತ್ತದೆ, ನಿಶ್ಚಿಂತೆಯಿಂದಿರುತ್ತದೆ.

ಹಾಂ, ತಪ್ಪು ತಿಳಿಯಬೇಡಿ. ನೀವಂದುಕೊಳ್ಳಬಹುದು, ದಕ್ಷಿಣ ಕನ್ನಡ ಜಿಲ್ಲೆ ಹೇಗೂ ಘಟ್ಟದಿಂದ ಕೆಳಗಿದೆ, ಅಲ್ಲಿನವರಿಗೂ ರಾಜ್ಯದ ಬೇರೆ ಜನರ ವಿಚಾರಗಳಿಗೂ ಯಾವುದೇ ಸಂಬಂಧವಿರುವುದಿಲ್ಲ, ಬೇರೆಡೆಗಳಲ್ಲಿನ ಸಮಸ್ಯೆಗಳ ಬಿಸಿ, ಸಾಧಕ ಬಾಧಕಗಳು ಅವರಿಗೆ ತಟ್ಟುವುದಿಲ್ಲ. ಹಾಗಾಗಿ ತಮ್ಮದಲ್ಲದ ಸಮಸ್ಯೆಗಳಿಗೆ, ವಿಚಾರಗಳಿಗೆ ಅಲ್ಲಿನ ಜನರು ಪ್ರತಿಭಟಿಸುವ, ಪ್ರತಿಕ್ರಿಯಿಸುವ ಗೋಜಿಗೆ ಹೋಗುವುದಿಲ್ಲ. ಹೇಗೂ ತುಂಬಾ ವಿದ್ಯಾವಂತರು, ಬುದ್ಧಿವಂತರು. ಹಾಯಾಗಿ ಕೆಲಸ ಮಾಡುತ್ತಾ ಮೀನು ಮತ್ತೊಂದನ್ನು ತಿನ್ನುತ್ತಾ ನಿರುಪದ್ರವಿಗಳಾಗಿ ಜೀವನ ಸಾಗಿಸುತ್ತಾರೆಂದು.

ಊಂಹೂಂ…! ಹಾಗೆಂದು ನೀವು ತಿಳಿದುಕೊಂಡಿದ್ದೇ ಆದರೆ… ಅದು ನಿಮ್ಮ ತಪ್ಪು. ಕರಾವಳಿಯ ಜನರು ನೀವಂದುಕೊಂಡಂತೆ ಇಲ್ಲವೇ ಇಲ್ಲ.

ನಿಜ ವಿಷಯವೇನೆಂದರೆ, ಅವರು ಯಾವುದಕ್ಕೂ ಕ್ಯಾರೇ ಅನ್ನುವವರಲ್ಲ. ಕರ್ನಾಟಕ ಬಿಡಿ, ದೇಶವೇ ಅಡಿಮೇಲಾದರೂ ದಕ್ಷಿಣ ಕನ್ನಡಿಗರು ಕಿಂಚಿತ್ತೂ ವಿಚಲಿತರಾಗುವುದಿಲ್ಲ. ಅಷ್ಟೇ ಅಲ್ಲ, ಯಾರೇ ಬಂದು ತಮ್ಮದೇ ಜಿಲ್ಲೆಯನ್ನು ಆಕ್ರಮಿಸಿದರೂ ಅವರು ನಿದ್ದೆಯಿಂದೇಳುವುದೂ ಇಲ್ಲ ಗೊತ್ತುಂಟಾ?!

ಹೌದು ಮಾರಾಯರೇ, ಕಾವೇರಿ, ಕಳಸಾ ಬಂಡೂರಿಗೆ ಬೆಂಕಿ ಬೀಳಲಿ, ಇಲ್ಲಿನ ಜೀವನದಿ ನೇತ್ರಾವತಿಯ ನೀರನ್ನೇ ಶಾಶ್ವತವಾಗಿ ಮಾಯ ಮಾಡಲಾಗುತ್ತದೆ ಎಂದು ಹೇಳಿದರೂ ಕರಾವಳಿಗರು ಚಿಂತೆ ಮಾಡುವುದೇ ಇಲ್ಲ ಗೊತ್ತುಂಟಾ ನಿಮಗೆ?

ದೇಶದ ಬೇರೆಲ್ಲಾ ರಾಜ್ಯ, ಪ್ರದೇಶಗಳಲ್ಲಿ ನೆಲೆ ಕಾಣದೆ ಕಡೆಗೆ ಕನ್ನಡ ಕರಾವಳಿಗೆ ಬಂದು ಸ್ಥಾಪನೆಯಾಗುವ ಪರಿಸರ, ಜನ ಜೀವಿಗಳಿಗೆ ಅಪಾಯಕಾರಿಯಾಗುವಂಥ ಹಲವು ಯೋಜನೆ, ಕೈಗಾರಿಕೆಗಳು ಅನಾಯಾಸವಾಗಿ, ಯಾವುದೇ ಅಡೆತಡೆಯಿಲ್ಲದೆ ಪ್ರಾರಂಭವಾಗಿ ಕಾರ್ಯಾರಂಭವಾಗುತ್ತವೆ. ಸೆಜ್, ರಾಸಾಯನಿಕ, ಪೆಟ್ರೋಲಿಯಂ ಕಾರ್ಖಾನೆಗಳಿಗೆ ಸಮೃದ್ಧ ಕೃಷಿ ಭೂಮಿಯನ್ನು, ನೀರಾವರಿ ಪ್ರದೇಶಗಳನ್ನು ಆಪೋಷನ ತೆಗೆದುಕೊಳ್ಳಲಾಗುತ್ತದೆ. ಗ್ಯಾಸ್ ಪೈಪ್‍ಲೈನ್, ತೈಲ ಸಾಗಾಟ ಮುಂತಾದ ಯೋಜನೆಗಳಿಗಾಗಿಯೂ ದಟ್ಟ ಅರಣ್ಯ, ಕೃಷಿಯುಕ್ತ, ತೋಟಗಳುಳ್ಳ ಭೂಮಿಯನ್ನೇ ಆಕ್ರಮಿಸಲಾಗುತ್ತದೆ. ಇತ್ತೀಚೆಗೆ ಪ್ರಸಿದ್ಧಿಗೆ ಬಂದ ನಿಡ್ಡೋಡಿಯ ಉಷ್ಣ ವಿದ್ಯುತ್ ಸ್ಥಾವರದ್ದೂ ಇದೇ ಕಥೆ.

ಇಲ್ಲ, ಇಲ್ಲ. ಈ ಎಲ್ಲಾ ವಿಚಾರಗಳಿಗೆ ತುಳುನಾಡಿನಲ್ಲಿ ಹೇಳಿಕೊಳ್ಳುವಂಥ ಯಾವುದೇ ಪ್ರತಿಭಟನೆ, ವಿರೋಧ ಕಂಡು ಬರುವುದಿಲ್ಲ. ನಿರ್ದಿಷ್ಟ ಯೋಜನೆಗಳಿಗೆ ನೇರವಾಗಿ ಬಲಿಯಾಗುವ ಜನರು ಮಾತ್ರ ಅಲ್ಪ ಸ್ವಲ್ಪವಾಗಿ ಕೂಗೆಬ್ಬಿಸಿದ್ದು ಬಿಟ್ಟರೆ ಅದು ಇಡೀ ಜಿಲ್ಲೆಗೆ ವ್ಯಾಪಿಸಿದ್ದು ಅತ್ಯಲ್ಪ. ಸರಕಾರಿ ಯೋಜನೆಗಳು, ಸ್ಥಾವರಗಳು, ಕೈಗಾರಿಕೆಗಳು ಅನಾಯಾಸವಾಗಿ ಜಾರಿಗೊಳ್ಳುತ್ತಿರುತ್ತಲೇ ಇರುತ್ತವೆ. ಮೊದ ಮೊದಲು ಕೇಳಿ ಬಂದ ಕೂಗು, ಕ್ಷೀಣ ಪ್ರತಿಭಟನೆ ಕೆಲ ದಿನಗಳಲ್ಲಿ ಮರೆಯಾಗಿ ಬಿಡುತ್ತದೆ.

ಅದೆಲ್ಲಾ ಬಿಡಿ. ಪಶ್ಚಿಮ ಘಟ್ಟವನ್ನೇ ಅಗೆದು, ಬಗೆದು ಅತ್ಯಂತ ಸೂಕ್ಷ್ಮ ಅರಣ್ಯ ಪ್ರದೇಶ, ಜೀವ ವೈವಿಧ್ಯಗಳ ಆಗರವನ್ನೇ ನಿರ್ದಯೆಯಿಂದ ಕಡಿದು, ನಾಶಗೊಳಿಸಿ ನೇತ್ರಾವತಿ ನದಿಯ ಉಗಮ ಸ್ಥಾನವನ್ನೇ ಪಲ್ಲಟಗೊಳಿಸಿ ಕಾಲ ಕ್ರಮೇಣ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ನೀರಿನ ಸೆಲೆ, ಮೂಲವನ್ನೇ ಬತ್ತಿಸುವಂಥ ಯೋಜನೆಯಾದ ಎತ್ತಿನ ಹೊಳೆ ಯೋಜನೆಗೇ ತುಳು ನಾಡಿನ ಜನರು ಒಕ್ಕೊರಲಿನಿಂದ ಪ್ರತಿಭಟಿಸಿದ್ದು ಅಷ್ಟಕ್ಕಷ್ಟೇ!

ಹಾಂ, ನೇತ್ರಾವತಿಯ ವಿಚಾರದಲ್ಲಿ, ಅದಕ್ಕಿಂತ ಮೊದಲು ನಿಡ್ಡೋಡಿ ಸ್ಥಾವರದ ವಿಚಾರದಲ್ಲಿ ಕರಾವಳಿಯಲ್ಲಿ ಸ್ವಲ್ಪ ಗಲಾಟೆ ನಡೆದಿದೆ. ಎಂಎಸ್‍ಇಝಡ್ ವಿಚಾರದಲ್ಲಿ ಕೃಷಿಕ ಗ್ರೆಗೊರಿ ಪತ್ರಾವೊ ಏಕಾಂಗಿ ಹೋರಾಟ ನಡೆಸಿದ್ದು, ಅದರಲ್ಲೂ ಆತನ ಮನೆಯನ್ನು ಧ್ವಂಸಗೊಳಿಸಿದ ಚಿತ್ರಣವನ್ನು ಕಂಡು ಜನರು ಮರುಗಿದ್ದು ದೊಡ್ಡ ಸುದ್ದಿಯಾಗಿತ್ತು (ಇದೇ ಘಟನೆಯನ್ನು ಬಳಸಿ ‘ರಿಕ್ಕಿ’ ಸಿನೆಮಾ ನಿರ್ಮಾಣವಾಗಿದೆ). ನಿಡ್ಡೋಡಿ ಸ್ಥಾವರದ ವಿರುದ್ಧ ಸಾಕಷ್ಟು ಹೋರಾಟವಾಗಿತ್ತು. ಅದು ಅಲ್ಲಿನ ರೈತ, ನಿವಾಸಿಗಳಿಂದ ಮಾತ್ರ. ಕರಾವಳಿಯ ಇತರೆಡೆಗಳ ಜನರಿಗೆ ಅದು ತಟ್ಟಿದ್ದು ಅಷ್ಟಕ್ಕಷ್ಟೆ!

ನೆನಪಿರಲಿ, ಎಂದಿನಂತೆ ನಿಡ್ಡೋಡಿಯ ಪ್ರಸ್ತಾವಿತ ಸ್ಥಾವರಕ್ಕೂ ಬಳಕೆಯಾಗುವುದು ಶತಮಾನಗಳಿಂದ ಕೃಷಿ, ತೋಟಗಾರಿಕೆ ನಡೆದುಕೊಂಡು ಬಂದಿರುವ ಸಮೃದ್ಧ ನೀರಾಶ್ರಯವಿರುವ ಸ್ವಚ್ಛಂದ ಪರಿಸರವನ್ನೊಳಗೊಂಡಿರುವ ಭೂಮಿ.

ಇದ್ದುದರಲ್ಲಿ, ನೇತ್ರಾವತಿ ಉಳಿಸುವ ಆಂದೋಲನ (ಎತ್ತಿನಹೊಳೆ ಯೋಜನೆಯ ವಿರೋಧ) ಕ್ಕಾಗಿ ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಪ್ರತಿಭಟನೆ, ಕಾರ್ಯಕ್ರಮಗಳು, ಹೋರಾಟ, ಬಂದ್ ನಡೆದಿದೆ. ಅದಕ್ಕೆ ಕಾರಣ ಕೆಲವು ಕಾರ್ಯಕರ್ತರು ಪಟ್ಟು ಹಿಡಿದು ಹೋರಾಡಿದ್ದು. ಎಲ್ಲಾ ರಾಜಕೀಯ ಪಕ್ಷ, ಮುಖಂಡರಿಗೂ ತಮ್ಮ ಅಸ್ತಿತ್ವ, ಮಾನ ಉಳಿಸುವುದಕ್ಕಾಗಿ ನೇತ್ರಾವತಿ ಉಳಿಸುವ ಹೋರಾಟದಲ್ಲಿ ಭಾಗಿಯಾಗುವುದು ಅನಿವಾರ್ಯವಾಗಿದ್ದರಿಂದ ತೋರಿಕೆಗೆಂಬಂತೆ ರಾಜಕಾರಣಿಗಳು ಈ ವಿಚಾರದಲ್ಲಿ ರಸ್ತೆಗೆ ಇಳಿಯಲೇಬೇಕಾಗಿ ಬಂದಿತ್ತು.

ನೇತ್ರಾವತಿ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಂಡಿದ್ದು ಹಳ್ಳಿ, ಗ್ರಾಮೀಣ ಪ್ರದೇಶದವರೇ ಹೊರತು, ಇದೇ ನದಿಯ ನೀರನ್ನೇ ದೈನಂದಿನ ಜೀವನಕ್ಕಾಗಿ ಆಶ್ರಯಿಸಿಕೊಂಡಿರುವ ಮಂಗಳೂರಿನ ನಾಗರಿಕರಲ್ಲ! ಇದು ಮತ್ತೊಂದು ಅಚ್ಚರಿ!

ಇಂತಹ ಹಿನ್ನೆಲೆ, ಚರಿತ್ರೆಯುಳ್ಳ ಕರಾವಳಿಗರು ಈಗ, ತಮಿಳುನಾಡಿನ ಜನರು ಜಲ್ಲಿಕಟ್ಟು ನಿಷೇಧವನ್ನು ವಿರೋಧಿಸಿದಂತೆ ಕಂಬಳದ ನಿಷೇಧ ತೆರವುಗೊಳಿಸುವುದಕ್ಕಾಗಿ ಹೋರಾಡುತ್ತಾರಂತೆ! ಇದನ್ನು ಯಾರಾದರೂ ನಂಬುತ್ತಾರಾ!?

ಅಲ್ಲ ಮಾರಾಯರೇ, ತಮ್ಮ ನೆಲ, ಜಲಕ್ಕೇ ಅಪಾಯ ಬಂದೊದಗಿದಾಲೂ ನಿದ್ದೆಯಿಂದೇಳದ ಈ ಜನರು ಇನ್ನೀಗ ಕಂಬಳದ ಕೋಣಗಳಿಗಾಗಿ ರಸ್ತೆಗಿಳಿದು ಹೋರಾಟ ಮಾಡುತ್ತಾರಾ? ಎಂಥ ಜೋಕ್ ಮಾರ್ರೆ!?

ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಟಾಟಾ ನ್ಯಾನೋ ಉದ್ದಿಮೆಗಾಗಿ ನಡೆದ ಕರಾಳ ಹಿಂಸಾತ್ಮಕ ಪ್ರತಿಭಟನೆ ಮರೆಯುವುದುಂಟೆ? ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣದಲ್ಲಿ ವರ್ಷಗಳ ಕಾಲ ನಡೆದ ಪ್ರತಿಭಟನೆ, ಹೋರಾಟ ಇನ್ನೂ ಹಚ್ಚ ಹಸಿರಾಗಿದೆ. ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳದಲ್ಲಿಯೂ ಸಹ, ಅಲ್ಲಿನವರು ತಮ್ಮ ರಾಜ್ಯ, ನಾಡು, ಭಾಷೆಗಾಗಿ ನಡೆಸುವ ಕೆಚ್ಚೆದೆಯ ಹೋರಾಟ, ದುಡಿಮೆ, ತೋರಿಸುವ ಒಗ್ಗಟ್ಟು ಇಡೀ ಕರ್ನಾಟಕದಲ್ಲಿ ಕಂಡು ಬರುವುದಿಲ್ಲ.

ಕೇವಲ ಎರಡೇ ಎರಡು ಲೋಕಸಭಾ ಸದಸ್ಯರನ್ನು ಹೊಂದಿರುವ ಗೋವಾ ರಾಜ್ಯದ ಮುಂದೆ ನಮ್ಮ 28 ಲೋಕಸಭೆ ಮತ್ತು 224 ವಿಧಾನಸಭಾ ಸದಸ್ಯರ ಬೇಳೆ ಬೇಯುವುದಿಲ್ಲ! ಅದಕ್ಕಿಂತ ಹೀನ ಪರಿಸ್ಥಿತಿ ಬೇರಿನ್ನೇನಿದ್ದೀತು.

ಅದೆಲ್ಲಾ ಬಿಟ್ಟು ನಮ್ಮ ದಕ್ಷಿಣ ಕನ್ನಡದ ಜನರು, ರಾಜಕಾರಣಿಗಳು, ರಾಜಕೀಯ ಪಕ್ಷಗಳು ಒಗ್ಗೂಡುತ್ತಾರಂತೆ!

ಹಾಂ, ಕರಾವಳಿ ಜನರೂ ಸಹ ಬದ್ಧತೆಯಿಂದ ಪ್ರತಿಭಟನೆ, ಗಲಾಟೆ, ಬಂದ್ ಮಾಡುತ್ತಾರೆ. ಅದು ಒಂದೇ ಕಾರಣಕ್ಕಾಗಿ – ಕೋಮು ವಿಚಾರಕ್ಕಾಗಿ ಮಾತ್ರ!

ಇಲ್ಲಿ ಅತ್ಯಂತ ನಿಕೃಷ್ಟ ರಸ್ತೆಗಳಿವೆ, ಮೂಲ ಸೌಕರ್ಯಗಳ ಕೊರತೆಯಿದೆ, ಆಗಬೇಕಾದ ಬೇಕಾದಷ್ಟು ಅಭಿವೃದ್ಧಿ ಕಾರ್ಯಗಳಿವೆ. ಇವ್ಯಾವುದಕ್ಕಾಗಿ ಇಲ್ಲಿ ಪ್ರತಿಭಟನೆ, ಹೋರಾಟಗಳು ನಡೆಯುವುದಿಲ್ಲ. ಕೆಲವು ರಸ್ತೆಗಳಂತೂ ಭೀಕರ ಪರಿಸ್ಥಿತಿಯಲ್ಲಿವೆ. ಅಲ್ಲಿನ ಸಾರ್ವಜನಿಕರು, ಪ್ರಯಾಣಿಕರು, ಬಸ್ಸು ರಿಕ್ಷಾ ಚಾಲಕ ಮಾಲಕರು ಯಾವತ್ತೂ ಅದರ ವಿರುದ್ಧ ಸಣ್ಣ ದನಿಯೆತ್ತುವುದಿಲ್ಲ.

ಆದರೆ ಇದೇ ಚಾಲಕ, ಕಂಡಕ್ಟರ್‍ಗಳಿಗೆ ತಮ್ಮ ವಾಹನದಲ್ಲಿ ಯಾವುದೋ ಹೆಣ್ಣು ಗಂಡಿನ ಜೋಡಿಯೊಂದು ಜೊತೆಗೆ ಪಯಣಿಸಿದರೆ ಸಾಕು ಅದು ಮಹತ್ತರ ವಿಚಾರವಾಗಿ ಕಾಣುತ್ತದೆ. ಕ್ಷಣ ಮಾತ್ರದಲ್ಲಿ ಸಂಘಟನೆಗಳ ಕಾರ್ಯಕರ್ತರು ಕ್ಷಿಪ್ರ ಕಾರ್ಯಾಚರಣೆಗಿಳಿಯುತ್ತಾರೆ. ನಂತರದ ಬೆಳವಣಿಗೆಗಳಿಂದ ಜಿಲ್ಲೆಗೆ ಜಿಲ್ಲೆಯೇ ಕುಲುಮೆಯಂತಾಗುತ್ತದೆ.

ದಕ್ಷಿಣ ಕನ್ನಡದಲ್ಲಿ ಬಂದ್, ಪ್ರತಿಭಟನೆಗೆ ಕಾರಣವಾಗುವ ಸಂಗತಿಗಳೆಂದರೆ ಅವು ಬರೀ ಕೋಮು ವಿಚಾರಗಳೇ. ಬೇರೆ ಯಾವುದೇ ವಿಚಾರಗಳಿಗೆ ಇಲ್ಲಿನ ಕಾರ್ಯಕರ್ತರು, ಸಂಘಟನೆಗಳು ಮತ್ತು ರಾಜಕಾರಣಿಗಳು ನಿರ್ಲಿಪ್ತರು. ಜನರೂ ಅಷ್ಟೇ.

ಇಲ್ಲಿ ಯಾರೋ ದನದ ಮಾಂಸ ಮಾರಿದರೆ ಜಿಲ್ಲೆಗೆ ಜಿಲ್ಲೆಯೇ ಹೊತ್ತಿ ಉರಿಯುತ್ತದೆ. ಎಲ್ಲೋ ಯಾರೋ ಮತಾಂತರಗೊಂಡರೆ, ಭಿನ್ನ ಕೋಮಿನ ಜೋಡಿಯೊಂದು ಜೊತೆಗೆ ಕಾಣಿಸಿದರೆ, ವಿಭಿನ್ನ ಪಕ್ಷ/ಜಾತಿ/ಧರ್ಮಗಳ ವ್ಯಕ್ತಿಗಳು ತಮ್ಮದೇ ಕಾರಣಕ್ಕಾಗಿ ಕಾದಾಡಿಕೊಂಡರೆ ಜಿಲ್ಲೆಗೆ ಜಿಲ್ಲೆಯೇ ಬೆಚ್ಚಿ ಬೀಳುತ್ತದೆ, ಸ್ತಬ್ಧವಾಗುತ್ತದೆ. ಸೆಕ್ಷನ್, ಕರ್ಫ್ಯೂ ಜಾರಿಗೊಳ್ಳುತ್ತದೆ!

ದೇವಳಗಳ ಮೂರ್ತಿಯ ಗಾಜೊಂದು ಪುಡಿಯಾಗಿ ಬಿದ್ದರೆ ಸಾಕು, ಆಯಾ ಧರ್ಮಗಳವರು ಅದನ್ನು ಪ್ರಪಂಚದ ಅತಿ ದೊಡ್ಡ, ಭಯಾನಕ ಸುದ್ದಿಯೆಂಬಂತೆ ಬಿಂಬಿಸುತ್ತಾರೆ. ಪ್ರಪಂಚವೇ ಸರ್ವನಾಶವಾಯಿತೆಂಬಂತೆ ಕೂಗೆಬ್ಬಿಸುತ್ತಾರೆ. ಇಲ್ಲಿ ಈ ವಿಚಾರದಲ್ಲಿ ಎಲ್ಲಾ ಧರ್ಮಗಳ ಜನರು ಬಹುತೇಕ ಒಂದೇ ಎನ್ನಬಹುದು. ತಮ್ಮ ಧರ್ಮ, ಜಾತಿ ವಿಚಾರ ಬಿಟ್ಟು ಇಲ್ಲಿನ ಬಹುತೇಕರಿಗೆ ಬೇರೆ ಯಾವುದೇ ವಿಚಾರ, ಸಮಸ್ಯೆ, ತೊಂದರೆಗಳು ಗೌಣ.

ಇಂತಹ ಪರಿಸ್ಥಿತಿಯಲ್ಲಿ, ಅದೂ ಕರಾವಳಿಯ ಮುಖಂಡರು, ರಾಜಕಾರಣಿಗಳು ಸೇರಿ ಕಂಬಳದ ಮೇಲಿನ ನಿಷೇಧವನ್ನು ತೆರವುಗೊಳಿಸಲು ದುಡಿಯುತ್ತಾರೆಯೆ? ಹೋರಾಡುತ್ತಾರೆಯೆ? ಎಷ್ಟು ದಿನ, ಎಲ್ಲಿಯ ತನಕ ಈ ಕೆಚ್ಚು, ಉತ್ಸಾಹವಿದ್ದೀತು?

ನೋಡೋಣ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಆಗಲಿ, ಕಂಬಳಕ್ಕಾಗಿಯಾದರೂ ಕರಾವಳಿಯ ಜನರು ಒಗ್ಗೂಡಿ ಹೋರಾಡಿ ಜಯವನ್ನು ತರಲಿ.

ಬರಹ : ಡೊನಾಲ್ಡ್ ಪಿರೇರಾ ಬೆಳ್ತಂಗಡಿ
ಪತ್ರಕರ್ತರು

ಹೆಚ್ಚಿನ ಬರಹಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Letters To Editor
ಹಣ ಬೇಡ…
‘ಆತ್ಮಹತ್ಯೆ’ಯೊ? ‘ಸ್ವಹತ್ಯೆ’ಯೊ?
Business
Tour
Astrology
Cricket Score
Poll Questions

2018ರ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ?

Loading ... Loading ...