‘ಆಪಾದ್ಬಾಂಧವ ಅಂಬರೀಶ್’ ಬಗ್ಗೆ ದೊಡ್ಡಣ್ಣ ಬಿಚ್ಚಿಟ್ಟ ಈ ಕತೆ ಓದಿ.!


Monday, March 18th, 2019 1:56 pm

ಸ್ಪೆಷಲ್ ಡೆಸ್ಕ್ : ಅಂಬರೀಶ್, ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ. ಜೊತೆಗೆ ಅಷ್ಟೇ ಸ್ನೇಹ ಜೀವಿ. ಹೀಗಾಗಿ ಅಂಬರೀಶ್ ಸದಾ ನಮ್ಮನ್ನು ಅಗಲಿದ್ದರೂ ಅವರ ನಟನೆ, ಅವರ ಸಾಮಾಜಿಕ ಕಾರ್ಯ, ರಾಜಕೀಯ ಸೇವೆಯಿಂದ ಮರೆಯಾಗದೇ ಉಳಿದಿದ್ದಾರೆ.

ನಟ ಅಂಬರೀಶ್ ಪತ್ನಿ ಸುಮಲತಾ, ಇಂದು ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುವುದಾಗಿ ಘೋಷಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ನಟ ದೊಡ್ಡಣ್ಣ, ಮತ್ತೆ ಅಂಬರೀಶ್ ನೆನೆದು ಅವರೊಬ್ಬರೇ ಕಣ್ಣುಗಳನ್ನು ಒದ್ದೆ ಮಾಡಿಕೊಂಡಿದ್ದಲ್ಲದೇ, ಎಲ್ಲರ ಕಣ್ಣನ್ನು ಒದ್ದೆ ಮಾಡಿದರು.

ಅಂದಹಾಗೇ ತುಂಬಾ ಭಾವುಕರಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೊಡ್ಡಣ್ಣ, ಅಂಬರೀಶ್ ತನಗೆ ಸದಾ ಆಪಾದ್ಬಾಂಧವ. ಅವರನ್ನು ನಾನು ನೆನೆಯದ ದಿನಗಳಿಲ್ಲ ಎಂದು ಭಾವುಕರಾಗಿ ನುಡಿದರು. ಇದೇ ವೇಳೆ ಅಂಬರೀಶ್ ಆಪಾದ್ಬಾಂಧವ ಆದ ಕತೆಯೊಂದನ್ನು ಹೇಳಿದ್ದು.. ಎಲ್ಲರನ್ನೂ ಭಾವುಕರನ್ನಾಗಿಸಿತು. ಆ ಕತೆ ಮುಂದೆ ಓದಿ..

ಅದೊಂದು ದಿನ ಹಿರಿಯ ನಟ ದೊಡ್ಡಣ್ಣ ಮತ್ತು ಗೆಳೆಯರು ಸೇರಿ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಸಿನಿಮಾ ಚಿತ್ರೀಕರಣಕ್ಕಾಗಿ, ಜಮ್ಮು-ಕಾಶ್ಮೀರಕ್ಕೆ ತೆರಳಿದ್ದರು. ಅಲ್ಲಿಂದ ಶ್ರೀನಗರಕ್ಕೆ ತೆರಳಿ, ಶೂಟಿಂಗ್ ಮುಗಿಸಿದರು. ಶ್ರೀನಗರಕ್ಕೆ ಸಮೀಪದಲ್ಲೇ ವೈಷ್ಣವದೇವಿ ದೇವಸ್ಥಾನವಿದೆ. ಬನ್ನಿ ಹೇಗೂ ಹತ್ತಿರವೇ ಬಂದಿದ್ದೇವೆ ನೋಡಿಕೊಂಡು ಬರೋಣ ಎಂದು ಗೆಳೆಯರೆಲ್ಲಾ ಸೇರಿಕೊಂಡು ಹೋದರು.

ವೈಷ್ಣವದೇವಿ ದರ್ಶನ ಮಾಡಿಕೊಂಡು ಮರಳಿ ಜಮ್ಮುವಿನ ಹೊಟೇಲ್ ಗೆ ರಾತ್ರಿ ಮರಳಿದರು. ಈ ವೇಳೆ ಗೆಳೆಯರು, ಬೆಳಿಗ್ಗೆ ಬೆಂಗಳೂರಿಗೆ ವಿಮಾನ ಬುಕ್ ಆಗಿದೆ. 7.30ಕ್ಕೆ ಇರೋದು ದೊಡ್ಡಣ್ಣ, ನೀನು ಏನು ಯೋಚನೆ ಮಾಡಬೇಡ. ಅರಾಮಾಗಿ ಮಲಗು. ನಾವು ನಿನ್ನ ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನಾ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಮಲಗಿಸಿದರು.

ಗೆಳೆಯರು ಹೇಳಿದಂತೆ ಮರುದಿನ ಬೆಳಿಗ್ಗೆ ಜಮ್ಮುವಿನ ವಿಮಾನ ನಿಲ್ದಾಣವನ್ನು ತಲುಪಲು ಹೊರಟರು. ಆದರೇ ಜಮ್ಮುವಿನಲ್ಲಿ ಮುಷ್ಕರ ಇದ್ದರಿಂದ ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗಲಿಲ್ಲ. ಹೀಗಾಗಿ ಬೆಂಗಳೂರಿಗೆ ಹೋಗಲು ಬುಕ್ ಆಗಿದ್ದ ವಿಮಾನ, ಮಿಸ್ ಆಗುವಂತಾಯಿತು.

ಇನ್ನೂ ವಿಧಿಯಿಲ್ಲದೇ ವಿಮಾನ ನಿಲ್ದಾಣದಲ್ಲೇ ಕುಳಿತ ದೊಡ್ಡಣ್ಣ ಮತ್ತು ಸ್ನೇಹಿತರು, ಟೀ ಕುಡಿಯುತ್ತಾ ಮುಂದಿನ ವಿಮಾನದಲ್ಲಿ ಹೋಗೋಣವೆಂದು ಯೋಜನೆ ರೂಪಿಸಿಕೊಂಡು ಎಲ್ಲರ ಬಳಿ ಯಾರ್ ಯಾರ್ ಹತ್ತಿರ ಎಷ್ಟು ದುಡ್ಡು ಇದೆ ಹಾಕಿ, ಟಿಕೇಟ್ ಖರೀದಿ ಮಾಡೋಣ ಎಂದು ಹೇಳಿದರು. ಆದರೇ ಕಾಶ್ಮೀರದಲ್ಲಿ ಬ್ಯಾಕ್ವೆಂಟ್ ಕಡಿಮೆ ದರದಲ್ಲಿ ಸಿಗುತ್ತವೆ ಎಂಬ ಕಾರಣಕ್ಕೆ ಗೆಳೆಯರೆಲ್ಲಾ ಇದ್ದ ದುಡ್ಡಲ್ಲಿ ಮೂರು ನಾಲ್ಕು ಖರೀದಿಸಿದ್ದರಿಂದ, ಎಲ್ಲರೂ ತಮ್ಮ ಜೇಬುಗಳನ್ನು ತಡಕಾಡಿ ನೋಡುತ್ತಾರೆ. ಎಲ್ಲರ ಬಳಿ ಸೇರಿ ಮೂರು ಸಾವಿರಕ್ಕಿಂತ ಹೆಚ್ಚು ಹಣ ಇರಲಿಲ್ಲ.

ಅಯ್ಯೋ ಶಿವನೇ, ಬೆಂಗಳೂರಿಗೆ ವಾಪಾಸ್ ಹೋಗೋಕೆ ಏನ್ ಅಪ್ಪ ಮಾಡೋದು ಎಂದು ಯೋಚಿಸುತ್ತಾ ಕುಳಿತ ದೊಡ್ಡಣ್ಣ, ಯಾರಿಗೆ ಪೋನ್ ಮಾಡಲಿ.. ಯಾರು ನಮಗೆ ಸಹಾಯ ಮಾಡುತ್ತಾರೆ ಎಂದು ಯೋಚಿಸುತ್ತಿರುವಾಗಲೇ ಹೊಳೆದದ್ದು ಗೆಳೆಯ ಅಂಬರೀಶ್.

ಅಂಬರೀಶ್ 9 ಗಂಟೆಗೆ ಎಲ್ಲಾ ಯಾವತ್ತೂ ಏಳುತ್ತಿದ್ದವರಲ್ಲ. ಸಮಯ ನೋಡಿದರೇ 9 ಗಂಟೆ ಆಗಿದೆ. ಅಂಬರೀಶ್ ಗೆ ಪೋನ್ ಮಾಡಿದರೇ ಸಿಗುತ್ತಾರೋ ಇಲ್ಲವೋ ಎನ್ನುತ್ತಲೇ ಪೋನ್ ಮಾಡಿದೆ.  ನನ್ನ ಅದೃಷ್ಠಕ್ಕೆ ಅತ್ತಕಡೆಯಿಂದ ಅಂಬರೀಶ್ ಅವರೇ ಮಾತನಾಡಿದರು. ಅಂಬರೀಶ್ ಅವರೇ ನೇರವಾಗಿ ಪೋನ್ ರಿಸೀವ್ ಮಾಡಿದರೂ ಅಂದ್ರೇ, ನಮ್ಮ ಜೇಬ್ ಗೆ ದುಡ್ಡು ಬಂದಹಾಗೇ ಮನಸಿನಲ್ಲಿ ಅಂದುಕೊಂಡ ನಾನು.. ಅಂಬರೀಶ್ ಅವರನ್ನು ಮಾತನಾಡಿಸಿದೆ. ಏನ್ಲಾ ಬೆಳ್ ಬೆಳಿಗ್ಗೆಯೇ ಪೋನ್ ಮಾಡಿದ್ದೀಯಾ ಎಂದು ಕೇಳಿದ್ರಂತೆ.

ಅವರು ಏನ್ ಇಲ್ಲ… ಹೀಗೆ ಜಮ್ಮುವಿಗೆ ಶೂಟಿಂಗ್ ಗೆ ಬಂದಿದ್ವಿ. ವಿಮಾನ ನಿಲ್ದಾಣಕ್ಕೆ ಬರೋದು ಲೇಟ್ ಆಗಿ ಹೋಯ್ತು. ಬುಕ್ ಮಾಡಿದ ವಿಮಾನ ಮಿಸ್ ಆಯ್ತು. ಬೆಂಗಳೂರಿಗೆ ಮತ್ತೊಂದು ವಿಮಾನದಲ್ಲಿ ಬರೋದಕ್ಕೆ ಟಿಕೇಟ್ ಖರೀದಿಸಲು ನಮ್ಮ ಹತ್ತಿರ ದುಡ್ಡಿಲ್ಲ ಅಂದ್ರಂತೆ. ಅಂಬರೀಶ್ ಆಗ ಒಂದು ಐದು ನಿಮಿಷ ಸಂಸ್ಕೃತದಲ್ಲಿ ಅವರದೇ ಆದ ಭಾಷೆಯಲ್ಲಿ ಬೈದರು. ಸುಮ್ಮನೇ ಕೇಳಿಸಿಕೊಂಡ ನಾನು, ಏನ್ ಮಾಡೋದು ಅಂತ ಇರುವಾಗಲೇ.. ಚೆನ್ನಾಗಿ ಬೈದ ನಂತ್ರ ಮಾತು ಮುಂದುವರೆಸಿದ ಅಂಬರೀಶ್, ಮತ್ತೆ ವಿಮಾನ ಎಷ್ಟು ಹೊತ್ತಿಗೆ ಅಂತ ಕೇಳಿದರು.

ಜಮ್ಮುವಿನಿಂದ ನಮ್ಮ ದುರಾದೃಷ್ಠ ಎಂಬಂತೆ ಬೆಂಗಳೂರಿಗೆ ಪುನಹ ಇದ್ದ ವಿಮಾನ ಮಾರನೆಯ ದಿನ ಬೆಳಿಗ್ಗೆ 7.30ಕ್ಕೆ. ಇದನ್ನೇ ಹೇಳಿದೆ. ಆಗ ನೀನು ಹೋಟೆಲ್ ಎಲ್ಲಿ ಮಾಡಿಕೊಂಡು ಉಳಿದಿದ್ದೀಯಾ ಎಂದು ವಿಚಾರಿಸಿದ ಅವರು, ಆ ಹೋಟೆಲ್ ಸಮೀಪದಲ್ಲಿ ಮತ್ತೊಂದು ಹೋಟೆಲ್ ಇದೆ. ಅಲ್ಲಿ ಉಳಿದುಕೊಂಡಿರು. ನಾನು ಎಲ್ಲಾ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ನಾವು ಅಂಬರೀಶ್ ಹೇಳಿದಂತೆ ಹೋಟೆಲ್ ಗೆ ಬಂದು ಉಳಿದುಕೊಂಡ ಕೆಲ ಸಮಯದ ನಂತ್ರ ಅವರ ಪರಿಚಿತ ರಾಜಕೀಯ ವ್ಯಕ್ತಿಯೊಬ್ಬರು ಬಂದು ನಮಗೆ ಒಂದು ಲಕ್ಷ ಹಣವನ್ನು ಕೊಟ್ಟು ಹೋದರು. ನಮಗೆ ಎಷ್ಟು ಸಂತೋಷ ಆಯ್ತು ಅಂದ್ರೇ ಆ ಕ್ಷಣಕ್ಕೆ, ಮರಳುಗಾಡಿನಲ್ಲಿ ಓಯಾಸಿಸ್ ಚಿಲುಮೆಯ ನೀರು ಸಿಕ್ಕಹಾಗೆ ಆಯ್ತು. ಇದು ಅಂಬರೀಶ್ ಅಂದರೇ ಯಾವಾಗಲೂ ಆಪಾದ್ಬಾಂಧವ ಎನ್ನುವುದಕ್ಕೆ ಉದಾಹರಣೆ ಎಂದು ದೊಡ್ಡಣ್ಣ ನೆನೆದು ಭಾವುಕರಾದರು.

ಇನ್ನೂ ಬೆಂಗಳೂರಿಗೆ ಬಂದ ನಾನು… ಮತ್ತೆ ಅಂಬರೀಶ್ ಅವರನ್ನು ಕೆಲ ದಿನಗಳ ನಂತ್ರ ಭೇಟಿ ಮಾಡಿ.. ನೀ ಕೊಟ್ಟಿದ್ದಲ್ಲ ಆ ದುಡ್ಡು ವಾಪಾಸ್ ತಗೋ ಎಂದು ಕೊಡಲು ಹೋದೆ. ಮಂಡ್ಯ ಭಾಷೆಯಲ್ಲಿ ಎಷ್ಟು ಚೆನ್ನಾಗಿ ಮಾತಾಡಿದಾ ಅಂದ್ರೇ.. ಏನೋ ನನ್ಮಗನೇ.. ಎಷ್ಟು ಲಕ್ಷ ದುಡಿದಿದ್ದೀಯೋ.? ಅಂಬರೀಶ್ ಗೆ ಕೊಟ್ಟು ಅಭ್ಯಾಸನೇ ಹೊರತು, ಇಸ್ಕೊಂಡು ಅಭ್ಯಾಸ ಇಲ್ಲ.. ಮುಚ್ಕೊಂಡು ಹೋಗಲೇ ಎಂದು ಬೈದು ಕಳಿಸಿದರು ಎಂದು ಹೇಳಿ ಅಂಬರೀಶ್ ಆಪಾದ್ಬಾಂಧವನಾದ ಕತೆಯನ್ನು ಮುಗಿಸಿದರು.

ಬರಹ – ವಸಂತ ಬಿ ಈಶ್ವರಗೆರೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions