ಮೆಂತ್ಯೆ ಸೊಪ್ಪಿನ ಪಲಾವು ಮಾಡುವ ವಿಧಾನ ಹೀಗಿದೆ ಮಾಡಿ ನೋಡಿ!


Monday, July 31st, 2017 9:01 am


ಸ್ಪೇಷಲ್ ಡೆಸ್ಕ್ : ಮೆಂತ್ಯ ಸೊಪ್ಪಿನಲ್ಲಿ ಪಲಾವು ಮಾಡುವುದೆಂದರೆ ಸುಲಭ. ಆಗಾಗ್ಗೆ ವೆಜಿಟೆಬಲ್ ಪಲಾವು ಮಾಡಿ ಮಾಡಿ ಬೇಸರವಾದವರಿಗೆ ಅಷ್ಟೇ ಅಲ್ಲ. ಬ್ಯಾಚುಲರ್ ಕಿಚನ್ ನಲ್ಲೂ ಈ ಪಲಾವು ಮಾಡುವುದು ಸುಲಭ. ಮೆಂತ್ಯ ಸೊಪ್ಪಿನ ಜತೆಗೆ ಬಹಳಷ್ಟು ಸಾಮಗ್ರಿಗಳು ಇದ್ದರೂ ಆದೀತು, ಇಲ್ಲದಿದ್ದರೂ ಆದೀತು. ಬಹಳ ಸರಳವಾಗಿ ಹೇಳುವುದಾದರೆ, ಬೇಕಾಗುವ ಸಾಮಾನುಗಳು ಇಷ್ಟೇ.
ಮೂರು ಮಂದಿಗೆ ಆಗುವಂತೆ
1. ಕಾಲು ಕೆಜಿ ಅಕ್ಕಿ(ಬಾಸುಮತಿಯೆ ಬೇಕಾಗಿಲ್ಲ, ಸಾಮಾನ್ಯವಾದ ಅಕ್ಕಿಯಾದರೂ ಸಾಕು)
2. ಒಂದುಕಟ್ಟು ಎಳೆ ಮೆಂತ್ಯೆ ಸೊಪ್ಪು
3. ಮೂರು ಈರುಳ್ಳಿ
4. ಎರಡು ಕ್ಯಾರೆಟ್
5. ಒಂದು ಆಲೂಗೆಡ್ಡೆ
6. ಹತ್ತು ಬೀನ್ಸ್
7. ಎರಡು ತುಂಡು ಚಕ್ಕೆ
8. ಒಂದೆರಡು ಏಲಕ್ಕಿ
9. ಲವಂಗ 2
10. ಹಸಿಮೆಣಸು 3
11. ಸ್ವಲ್ಪ ತೆಂಗಿನಕಾಯಿ
12. 50 ಗ್ರಾಂನಷ್ಟು ಬಟಾಣಿ ಕಾಳು
13. ಹತ್ತೇ ಕಾಳು ಮೆಂತ್ಯೆ
14. ಐದು ಟೀ ಚಮಚ ಎಣ್ಣೆ (ರೀಫೈನ್ಡ್ ಆಯಿಲ್/ಕಡಲೆಕಾಯಿ ಎಣ್ಣೆ/ಒಳ್ಳೆಣ್ಣೆ/ತೆಂಗಿನೆಣ್ಣೆ)
15. ಒಂದು ತುಂಡು ಬೆಲ್ಲ
16. ಅಗತ್ಯದಷ್ಟು ಉಪ್ಪು
ಮಾಡುವ ವಿಧಾನ : ಮೊದಲಿಗ ೆಅನ್ನವನ್ನು ಮೊದಲೇ ಮಾಡಿಟ್ಟುಕೊಳ್ಳಬೇಕು. ಕುಕ್ಕರ್ ನಲ್ಲಿ ಬೇಯಿಸುವುದಾದರೆ, ಎರಡು ವಿಷಲ್ ಗೆ ಆರಿಸಿಡಬೇಕು. ಕ್ಯಾರೆಟ್, ಬೀನ್ಸ್, ಆಲೂಗೆಡ್ಡೆಗಳನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಬೇಕು. ಹಸಿ ಬಟಾಣಿ (ಒಣಗಿದ್ದರೆ ಅದನ್ನು ರಾತ್ರಿಯೇ ನೀರಿನಲ್ಲಿ ನೆನೆಸಿಟ್ಟಿರಬೇಕು)ಯನ್ನು ಕ್ಯಾರೆಟ್-ಬೀನ್ಸ್ ನೊಂದಿಗೆ ಬೇಯಿಸಬೇಕು. ಅದೂ ಒಂದು ವಿಷಲ್ ಗೆ ಆರಿಸುವುದು ಸೂಕ್ತ. ಮೆಂತ್ಯೆ ಸೊಪ್ಪನ್ನು ಶುಚಿಗೊಳಿಸಿ, ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ.

ಹಸಿಮೆಣಸು, ಚಕ್ಕೆ-ಲವಂಗ, ತೆಂಗಿನಕಾಯಿಯನ್ನು ಅರೆದಿಟ್ಟುಕೊಳ್ಳಿ. ಈರುಳ್ಳಿಯನ್ನು ಉದ್ದುದ್ದ ಕತ್ತರಿಸಿಟ್ಟುಕೊಳ್ಳಿ. ಒಲೆ ಮೇಲೆ ಬಾಣಲೆ ಇಟ್ಟು, ಒಲೆ ಹಚ್ಚಿದ ನಂತರ ಎಣ್ಣೆ ಹಾಕಿ. ಅದು ಬಿಸಿಯಾಗುತ್ತಿದ್ದಂತೆ, ಮೆಂತ್ಯೆ ಕಾಳನ್ನು ಹಾಕಿ, ಕೆಂಪಗಾಗುತ್ತಿದ್ದಂತೆ ಈರುಳ್ಳಿ ಹೋಳನ್ನು ಹಾಕಿ ಸ್ವಲ್ಪ ಕೆಂಪಗಾಗುವರೆಗೆ ಹುರಿಯಿರಿ. ನಂತರ ಆಲೂಗೆಡ್ಡೆ ಹೋಳುಗಳನ್ನು ಹಾಕಿ ಹುರಿಯಿರಿ. ಮೆಂತ್ಯೆ ಸೊಪ್ಪು ಹಾಕಿ, ಉಪ್ಪನ್ನು ಹಾಕಿ, ಕಾಲು ಚಮಚದಷ್ಟು ಅರಿಶಿನ, ಬೆಲ್ಲದ ತುಂಡನ್ನು ಹಾಕಿ ಹುರಿಯಿರಿ. ಐದು ನಿಮಿಷ ಹೀಗೆ ಮಾಡಿದ ನಂತರ, ಸೊಪ್ಪೆಲ್ಲಾ ನೀರಿನಲ್ಲಿ ನೆನೆದಂತೆ ಆಗುತ್ತದೆ. ಅದರರ್ಥ ಸೊಪ್ಪು ಬೆಂದಿದೆ. ಬಳಿಕ, ತರಕಾರಿ ಹೋಳುಗಳನ್ನು, ಬಟಾಣಿಯನ್ನು, ಅರೆದಿಟ್ಟ ತೆಂಗಿನಕಾಯಿಯನ್ನೂ ಹಾಕಿ ಕಲಸಿ, ಸ್ವಲ್ಪ ಕಾಲ ಹುರಿಯಬೇಕು. ಅದಾದ ನಂತರ ಅನ್ನವನ್ನು ಮಿಕ್ಸ್ ಮಾಡಿ. ಹಾಕಿದ ಉಪ್ಪು ಕಡಿಮೆಇದ್ದರೆ ಕಲಸುವಾಗ ಉಪ್ಪಿನ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಬಹುದು. ಅದರ ಮೇಲೆ ಕತ್ತರಿಸಿದ ಮೆಂತ್ಯೆ ಸೊಪ್ಪನ್ನೇ (ಕಡಿಮೆ ಪ್ರಮಾಣ) ಹಾಕಿ ಸಿಂಗರಿಸಬಹುದು.

ಗಮನದಲ್ಲಿಡಬೇಕಾದ ಟಿಪ್ಸ್
1. ಮೆಂತ್ಯೆ ಸೊಪ್ಪನ್ನು ಸಣ್ಣದಾಗಿ ಕತ್ತರಿಸದಿದ್ದರೆ, ಉಪ್ಪನ್ನು ಬೇಗ ಹೀರಿಕೊಳ್ಳುವುದಿಲ್ಲ ಹಾಗೂ ಒಂದು ಬಗೆಯ ಒರಟುತನವನ್ನು ಬಿಡುವುದಿಲ್ಲ.
2. ಕೊತ್ತಂಬರಿ ಸೊಪ್ಪಿಗೆ ಹೋಲಿಸಿದರೆ, ಮೆಂತ್ಯೆ ಸೊಪ್ಪು ಸ್ವಲ್ಪ ಒರಟು.
3. ಆಲೂಗೆಡ್ಡೆಯನ್ನು ಪ್ರತ್ಯೇಕವಾಗಿ ಹುರಿಯಿರಿ. ಉಳಿದ ತರಕಾರಿಗಳೊಂದಿಗೆ ಬೇಯಿಸಿದರೆ, ಕರಗುವ ಸಾಧ್ಯತೆ ಹೆಚ್ಚು. ಅಲೂಗೆಡ್ಡೆ ಒಂದು ಬಗೆಯಲ್ಲಿ ಸ್ಪಂಜಿನಂತಿರುವುದರಿಂದ ಉಳಿದ ತರಕಾರಿಗಳೊಂದಿಗೆ ತಿನ್ನುವಾಗ ವಿಶೇಷ ಅನುಭವ ನೀಡುತ್ತದೆ. ಅದಕ್ಕಾಗಿ ಶಾಖದಲ್ಲಿ (ಹುರಿಯುವ ಬಿಸಿಯಲ್ಲಿ) ಬೇಯುವಂತೆ ಸ್ವಲ್ಪ ಸಣ್ಣ ಹೋಳುಗಳನ್ನಾಗಿ ಕತ್ತರಿಸಿಟ್ಟುಕೊಳ್ಳಲು ಮರೆಯಬಾರದು.
4. ಸಾಮಾನ್ಯವಾಗಿ ಪಲಾವಿಗೆ ಹುಳಿ ಬಳಸುವ ಪದ್ಧತಿ ಕಡಿಮೆ. ಟೊಮೆಟೊ ಹಾಕಿದರೂ ಅದು ಬಹಳ ಹುಳಿಯನ್ನೇನೂ ಕೊಡದು. ಹುಳಿ ಬೇಕೆನ್ನುವವರು ಎರಡು ಕ್ಯಾಪ್ಸಿಕಂ ನ್ನು ಈರುಳ್ಳಿಯಂತೆ ಕತ್ತರಿಸಿ, ಈರುಳ್ಳಿಯೊಂದಿಗೆ ಹಾಕಿ ಹುರಿದಿಟ್ಟುಕೊಳ್ಳಬಹುದು.
5. ಟೊಮೆಟೊ ಸಹ ಹಾಕಬಹುದು. ಆದರೆ, ಟೊಮೆಟೊ ಹಾಕಿದರೆ, ಉಳಿದ ಬಾತ್ ಗಳಂತೆ ಅನ್ನಿಸುತ್ತದೆ.
6. ಚಕ್ಕೆ-ಲವಂಗ ಹೊರತುಪಡಿಸಿದಂತೆ ಬೇರೆ ಯಾವ ಗರಂಮಸಾಲೆಯನ್ನೂ ಬಳಸಬೇಡಿ. ಅದು ಮೆಂತ್ಯೆಯ ಪರಿಮಳವನ್ನೆ ಕೊಲ್ಲುತ್ತದೆ.
7. ತೆಂಗಿನಕಾಯಿಗೂ ಬೇರೆ ಯಾವ ಸೊಪ್ಪನ್ನೂ (ಕೊತ್ತಂಬರಿ, ಪುದಿನ ಇತ್ಯಾದಿ)ಬಳಸಬೇಡಿ.
8. ಅನ್ನವಾದ ನಂತರ ಕುಕ್ಕರ್ ನಿಂದ ತೆಗೆದು, ಬಟ್ಟಲುಗಳಲ್ಲಿ ಹರಡಿ ಇಡಿ. ಆಗ ಕಲಸಲು ಅನುಕೂಲವಾಗುತ್ತದೆ.
9. ಮೆಂತ್ಯೆ ಕಾಳಿನ ಹುರಿದ ಪರಿಮಳ ಚೆಂದ. ಅದಕ್ಕೆಂದೇ ಅದನ್ನು ಒಗ್ಗರಣೆಗೆ ಬಳಸಿ, ಕಪ್ಪಾಗದಂತೆ ಎಚ್ಚರ ವಹಿಸಿ.

ಬರಹ ಕೃಪೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions