ನೀವು ದೊಡ್ಡವರಲ್ಲ…. ಮರ್ಯಾದಸ್ತರೂ ಅಲ್ಲ..


Friday, September 21st, 2018 11:54 am

-ಡಾ.ಎನ್.ಕೆ.ಪದ್ಮನಾಭ
ನೀವು ದೊಡ್ಡವರು….!? ಮರ್ಯಾದಸ್ಥರು….?
ನಮ್ಮ ಪ್ರೇಮದ ಕೊಳಕೆ ಕಲ್ಲೆಸೆಯುವವರು
ತಿಳಿನೀರ ಮನಸ ಕಲುಕುವವರು
ನೀವು ನಡೆದದ್ದೇ ಹಾದಿ
ಕೊಲುವ ಕಲುಷಿತ ಭಾವ
ಕರುಳಕುಡಿಗಳ ರಕ್ತದಾಹ
ಕೊಂದು ಜಯಿಸುವ ಹಠ
ಜೊತೆಗೆ ಜಾತಿಗುಂಗುಗಳ ಕಾಯಿಲೆ
ನಾವೂ ಅಷ್ಟೇ…..
ಸುಲಭಕ್ಕೆ ಸಾಯುವುದಿಲ್ಲ
ಸೋಲೊಪ್ಪಿಕೊಳ್ಳುವುದೂ ಇಲ್ಲ
ಮತ್ತೆ ಬದುಕುತ್ತೇವೆ
ಒಲವಿನ ಹೆಸರು ಉಳಿಸುತ್ತೇವೆ
ಮನುಜಮತವ ಗೆಲ್ಲಿಸುತ್ತೇವೆ……


ಈಗಾಗಲೇ ಇಲ್ಲವಾದ ಅವರು ಹೀಗೆ ಸವಾಲೆಸೆಯುತ್ತಿರಬಹುದೇ? ಮನೆಯ ಹಿರಿಯರು ತಮ್ಮನ್ನು ಕೊಂದ ಸಣ್ಣತನವನ್ನು ನೆನೆದು ಹೀಗೆ ಒಳಗೊಳಗೆ ವ್ಯಂಗ್ಯವಾಡುತ್ತಿರಬಹುದೇ? ಕೊಲೆಗೈಯ್ಯುವ ಜಾಯಮಾನದ ಮೂಲಕ ಹೆದರಿಸುವ ನಡೆಯನ್ನು ಹೀಗೆ ತಣ್ಣಗೆ ತರಾಟೆಗೆ ತೆಗೆದುಕೊಳ್ಳುತ್ತಿರಬಹುದೇ? ಮರ್ಯಾದೆ ಉಳಿಸಿಕೊಳ್ಳುವ ಭರದಲ್ಲಿ ಮಾನಗೇಡಿತನ ಪ್ರದರ್ಶಿಸಿದ ದೊಡ್ಡವರ ವಿಲಕ್ಷಣ ಸ್ವಭಾವವನ್ನು ಹೀಗೆ ತರಾಟೆಗೆ ತೆಗೆದುಕೊಳ್ಳುತ್ತಿರಬಹುದೇ? ಕೊಲ್ಲಬೇಕೆಂದಿದ್ದರೆ ಹುಟ್ಟಿಸಿದ್ದಾದರೂ ಯಾಕೆ ಎಂದು ಕೇಳುತ್ತಿರಬಹುದೇ?….. ಇಲ್ಲ. ಗೊತ್ತಿಲ್ಲ. ಗೊತ್ತಾಗುತ್ತಲೇ ಇಲ್ಲ. ಸ್ಪಷ್ಟ ಉತ್ತರಗಳೂ ಹೊಳೆಯುತ್ತಿಲ್ಲ. ಮರ್ಯಾದೆಗೇಡು ಹತ್ಯೆಗೀಡಾದವರು ಇಲ್ಲವಾಗಿರಬಹುದು. ಅವರೊಳಗೇ ಮಣ್ಣಾಗಿರುವ ಸುಪ್ತಧ್ವನಿಗಳು ಜಡಗೊಂಡ ಈ ಸಮಾಜದೆಡೆಗೆ ಪ್ರಶ್ನೆಗಳನ್ನು ಎಸೆಯುತ್ತಲೇ ಇರುತ್ತವೆ. ಚಲನೆಯ ಸಂಚಲನ ತಂದುಕೊಳ್ಳುವವರೆಗೆ ಅವುಗಳು ಕಟ್ಟಿಕೊಂಡ ಮೌನದೊಳಗಿಂದ ಹತ್ತುಹಲವು ಭಾವಾರ್ಥಗಳ ಅಲೆಗಳು ನಿಗೂಢವಾಗಿ ಏಳುತ್ತಲೇ ಇರುತ್ತವೆ.

ಜಾತಿ, ಧರ್ಮ, ಕುಟುಂಬದ ಮರ್ಯಾದೆ ಉಳಿಸಿಕೊಳ್ಳುವ ಹಠದಲ್ಲಿ ಪೋಷಕರು ಮತ್ತು ಅವರೊಂದಿಗಿನವರು ಕೊಲ್ಲುವ ಹಾದಿಯನ್ನೇ ನೆಚ್ಚಿಕೊಳ್ಳುತ್ತಿದ್ದಾರೆ ಎನ್ನುವ ಸತ್ಯವನ್ನಂತೂ ಅರಗಿಸಿಕೊಳ್ಳಲಾಗುತ್ತಿಲ್ಲ. ಒಡಲೊಳಗೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ಜುಗಲ್‌ಬಂದಿಯಾಡುತ್ತಲೇ ಇದೆ. ಹೈದ್ರಾಬಾದ್‌ನಿಂದ ತೂರಿಬಂದ ಪ್ರಣವ್‌ಕುಮಾರ್ ಹತ್ಯೆ ಸಂಬಂಧಿತ ಸುದ್ದಿ ಜಾತಿ-ಧರ್ಮದ ಚೌಕಟ್ಟುಗಳೊಳಗಿನ ಕ್ರೌರ್ಯದ ಒಂದು ಮುಖವನ್ನಷ್ಟೇ ಪರಿಚಯಿಸಿದೆ. ಬಾಳಸಂಗಾತಿಯನ್ನು ಕಳೆದುಕೊಂಡ ಅಮೃತವರ್ಷಿಣಿಯೊಳಗಿನ ನೋವು ದಟ್ಟವಾಗಿರುವಾಗಲೇ ಸಂದೀಪ್ ಮತ್ತು ಮಾಧವಿ ದಂಪತಿಯನ್ನು ಹತ್ಯೆಗೈಯ್ಯುವ ಯತ್ನ ನಡೆದು ಆ ಕ್ರೌರ್ಯದ ಮತ್ತೊಂದು ವಿಕೃತಿಯನ್ನು ಜಗಜ್ಜಾಹೀರುಗೊಳಿಸಿದೆ. ಮಾಧವಿಯ ತಂದೆಯೇ ಹತ್ಯೆಗೆ ಯತ್ನಿಸಿದ್ದು ಮನುಕುಲದ ’ಪೌರುಷತ್ವ’ದ ಟೊಳ್ಳುತನವನ್ನು ಬೆತ್ತಲಾಗಿಸಿದೆ.

ಒಬ್ಬರು ಮತ್ತೊಬ್ಬರನ್ನು ಪ್ರೀತಿಸುತ್ತಾರೆ. ಬಿಟ್ಟಿರಲಾರದಷ್ಟು ಹತ್ತಿರಾಗುತ್ತಾರೆ. ಕ್ಷಣಕ್ಷಣವನ್ನೂ ಸಂಭ್ರಮಿಸುತ್ತಾರೆ. ಪ್ರೀತಿಯ ರೂಪಕವನ್ನು ಜೀವಂತಗೊಳಿಸಿಬಿಡುತ್ತಾರೆ. ಜಾತಿ-ಧರ್ಮಗಳ ಹಂಗಿನರಮನೆಗಳ ಗಡಿಗಳನ್ನು ದಾಟಿ ಮುಗಿಲಗಲ ಯಾನ ಕೈಗೊಳ್ಳುತ್ತಾರೆ. ಗಂಡು ಮತ್ತು ಹೆಣ್ಣು ಎಂಬ ಬೇಧ ಅಲ್ಲಿ ಇಲ್ಲವಾಗಿಬಿಡುತ್ತದೆ. ಅಲ್ಲಿ ಉಳಿದುಕೊಳ್ಳುವುದು ಅಪ್ಪಟ ಪ್ರೀತಿ ಮಾತ್ರ. ಆರಂಭಿಕ ಸಹಜ ಆಕರ್ಷಣೆಯ ಆಚೆಗಿನ ಸೌಂದರ್ಯದ ಪ್ರಭೆ ಆ ಕ್ಷಣಕ್ಕೆ ಜನ್ಮ ತಾಳುತ್ತದೆ. ಆಂತರ್ಯದ ಸೌಂದರ್ಯ ಪ್ರಖರಗೊಳ್ಳುತ್ತಾ ಇಬ್ಬರ ನಡುವಿನ ಬಾಂಧವ್ಯ ಜೀವಜಗದ ಅತ್ಯದ್ಭುತ ಕಾವ್ಯ ಎಂದೆನ್ನಿಸಿಕೊಳ್ಳುವಷ್ಟರ ಮಟ್ಟಿಗೆ ಗಟ್ಟಿಗೊಂಡುಬಿಡುತ್ತದೆ. ಏನನ್ನೂ ನಿರೀಕ್ಷಿಸದ ಬಿಂದುವನ್ನು ತಲುಪಿಕೊಂಡು ಮನುಷ್ಯ ಬದುಕಿನ ಆವರಣದೊಳಗೆ ಸಾಂಗತ್ಯದ ಹೊಸ ವ್ಯಾಖ್ಯಾನವನ್ನು ರೂಪಿಸಿಬಿಡುತ್ತದೆ. ಆದರೆ, ಅದನ್ನು ವಿರೂಪಗೊಳಿಸುವ ಮನುಷ್ಯ ಕ್ರೌರ್ಯ ತಕ್ಷಣವೇ ಕಾರ್ಯಾಚರಣೆಗಿಳಿದುಬಿಡುತ್ತದೆ. ಕೊಲೆಯ ಪರಿಭಾಷೆಯೊಂದಿಗೆ ಹಿಂಸಿಸಿ ಬೇಟೆಯಾಡಿಬಿಡುತ್ತದೆ. ಎರಡು ಮನಸ್ಸುಗಳ ಉಸಿರು ನಿಂತುಬಿಡುತ್ತದೆ. ಇತಿಹಾಸದ ಪುಟಗಳೊಳಗೆ ಮನುಷ್ಯರ ರಾಕ್ಷಸತ್ವ ದಾಖಲಾಗಿಬಿಡುತ್ತದೆ. ಆ ಕಾರಣಕ್ಕಾಗಿಯೇ ಇತಿಹಾಸದ ಒಡಲಾಳದೊಳಗೆ ಕಂಪನ ಮೂಡಿಬಿಡುತ್ತದೆ.

ಈ ಕ್ಷಣಕ್ಕೆ ಆತ್ಮೀಯ ಹಿರಿಯರಿಬ್ಬರ ಬದುಕಿನ ಸೊಗಡು ನೆನಪಾಗುತ್ತಿದೆ. ಅವರು ಒಬ್ಬರನ್ನೊಬ್ಬರು ಪ್ರೀತಿಸಿ ವಿವಾಹವಾದವರು. ಒಬ್ಬರದು ಅತ್ಯಂತ ಸಾಂಪ್ರದಾಯಿಕ ಹಿನ್ನೆಲೆಯ ಕುಟುಂಬವಾದರೆ ಮತ್ತೊಬ್ಬರದು ಜಾತಿವ್ಯವಸ್ಥೆಯ ಕರಾಳತೆಯನ್ನು ಅನುಷ್ಠಾನಗೊಳಿಸುವ ಯಜಮಾನಿಕೆಯ ಬಲಾಢ್ಯಕೇಂದ್ರದ ಮನೆತನ. ಇವರಿಬ್ಬರು ಮದುವೆಯಾಗುತ್ತಾರೆ ಎಂದಾಗ ಎರಡೂ ಕುಟುಂಬಗಳೊಳಗೆ ಆಕ್ರೋಶ ಮತ್ತು ಅಸಮಾಧಾನದ ಬೆಂಕಿ. ವಿರೋಧದ ನಿರಂತರ ತಿವಿತ. ಅದರ ನಡುವೆಯೂ ಅವರ ದಾಂಪತ್ಯ ಮುಂದುವರೆಯುತ್ತದೆ. ಒಂದೆರಡು ವರ್ಷ ಎರಡೂ ಮನೆಗಳವರಿಂದ ಬಹಿಷ್ಕಾರದ ಶಿಕ್ಷೆ. ಜಾತಿಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಕೌಟುಂಬಿಕ ಸಹಜ ಪ್ರೀತಿಯಿಂದ ವಂಚಿತರನ್ನಾಗಿಸುವ ಮೂಲಕ ಯಾತನೆಯ ಕೂಪಕ್ಕೆ ತಳ್ಳುವಿಕೆಯ ಪ್ರವೃತ್ತಿ. ಅವರ ಮದುವೆಯಾಗಿ ಒಂದುವರೆ ದಶಕ ಉರುಳಿದೆ. ಅವರೂ ಬದುಕಿದ್ದಾರೆ. ಅವರವರ ಮನೆಗಳವರೂ ಇವರನ್ನು ಮಾತನಾಡಲಾರಂಭಿಸಿದ್ದಾರೆ. ಜೀವಗಳನ್ನು ಬೇಟೆಯಾಡುವ ಬದಲು ಅವುಗಳ ಬಾಂಧವ್ಯವನ್ನು ಒಪ್ಪಿಕೊಂಡಿದ್ದಾರೆ. ಈ ಮಾದರಿಯ ಬದುಕು ಭಾರತದಂತಹ ದೇಶದಲ್ಲಿ ಅತ್ಯಂತ ಅಪರೂಪದ್ದು. ಪ್ರೀತಿಸಿದ ಎಲ್ಲರಿಗೂ ಇದೇ ತರಹದ ಬಾಂಧವ್ಯ ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸುವಂತಿಲ್ಲ. ಅಂಥ ನಿರೀಕ್ಷೆಗಳನ್ನೆಲ್ಲಾ ಹೊಸಕಿಹಾಕಬಲ್ಲ ಜಾತಿವ್ಯವಸ್ಥೆ ಇನ್ನೂ ತನ್ನ ಅಸ್ತಿತ್ವವನ್ನು ನಿರಂತರವಾಗಿ ಸಾಬೀತುಪಡಿಸುತ್ತಲೇ ಇದೆ.

ಜಾತಿ ಮತ್ತು ಧರ್ಮದ ಗೋಡೆಗಳು ಎರಡು ಜೀವಗಳು ಒಂದಾಗುವುದಕ್ಕೆ ಯಾಕೆ ಬಿಡುವುದಿಲ್ಲ? ಬಿಡುವುದಿಲ್ಲ ಅಂದರೆ ಬಿಡುವುದಿಲ್ಲ ಅಷ್ಟೇ. ಅದಕ್ಕೆ ಕಾರಣಗಳನ್ನೇಕೆ ನೀಡಬೇಕು ಎನ್ನುತ್ತದೆ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆ. ಯಾರ್‍ಯಾರು ಎಲ್ಲಿರಬೇಕೋ ಅಲ್ಲಿಯೇ ಇರಬೇಕು, ಅದನ್ನು ಬಿಟ್ಟು ಗೆರೆಯನ್ನು ದಾಟಿಬಿಟ್ಟರೆ? ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂಬ ಎಚ್ಚರವನ್ನೂ ನೀಡುತ್ತದೆ.

ಆ ಎಚ್ಚರವನ್ನೂ ತಿರಸ್ಕರಿಸಿ ಮುಂದಡಿಯಿಟ್ಟಿರೋ ಉಲ್ಲಂಘನೆಯ ನೆಪವನ್ನೊಡ್ಡಿ ಶಿಕ್ಷೆಗೊಳಪಡಿಸುತ್ತದೆ. ಅದು ಬಲವಂತವಾಗಿ ತೂರಿಬಿಡುವ ಶಿಕ್ಷೆ ಉಗ್ರಸ್ವರೂಪದ್ದಾಗಿರುತ್ತದೆ. ಅದು ನಿಮ್ಮ ಸದ್ದಡಗಿಸುತ್ತದೆ. ನಿಮ್ಮನ್ನು ಥಳಿಸುತ್ತದೆ. ನಿಮ್ಮ ಅಸ್ತಿತ್ವವನ್ನೇ ಇಲ್ಲವಾಗಿಸಿಬಿಡುತ್ತದೆ. ಕೌಟುಂಬಿಕ ಬಾಂಧವ್ಯದ ಕಪಟ ನಾಟಕವಾಡಿ ಯಾಮಾರಿಸಿ ಬರ್ಬರವಾಗಿ ಬೇಟೆಯಾಡಿಬಿಡುತ್ತದೆ.

ಆ ಅಮೃತವರ್ಷಿಣಿ ಗರ್ಭಿಣಿಯಾಗಿದ್ದ ಅವಧಿಯಲ್ಲಿ ಕಣ್ಣಮುಂದೆಯೇ ನಡೆದ ಪತಿಯ ಮಾರಣಹೋಮ ಇಂಥದ್ದೇ ಬೇಟೆಯ ಒಂದು ಸ್ವರೂಪವಷ್ಟೆ. ಇನ್ನೂ ಹೊರಜಗತ್ತಿಗೆ ಬಾರದ ಮಗುವೊಂದು ಗರ್ಭಸ್ಥವಾಗಿದ್ದಾಗಲೇ ತಂದೆಯ ಜೀವ ತೆಗೆಯುವ ಅಮಾನುಷ ನಡೆ ಭೀಕರವೆನ್ನಿಸುತ್ತದೆ. ’ಸೈರಾಟ್’ ಎಂಬ ಮರಾಠಿ ಸಿನಿಮಾದ ಕ್ಲೈಮ್ಯಾಕ್ಸ್‌ನ ಮುಂದುವರೆದ ಭಾಗದಂತೆ ಈ ಘಟನೆಯು ನಡೆದುಬಿಡುತ್ತದೆ.

ಆ ಕ್ಲೈಮ್ಯಾಕ್ಸ್ ಬಗ್ಗೆ ಇಲ್ಲಿ ಪ್ರಸ್ತಾಪಿಸಲೇಬೇಕು. ಅವಳು ಮೇಲ್ವರ್ಗದ ಕುಟುಂಬದ ಹುಡುಗಿ. ಅವನು ತಳಸಮುದಾಯದ ಹುಡುಗ. ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ಓಡಿಹೋಗುತ್ತಾರೆ. ಶೋಷಕ ಮನಸ್ಥಿತಿಯ ಕ್ರೌರ್ಯದ ನಡುವೆಯೂ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಾರೆ. ಅವರೊಳಗಿನ ನಿಸ್ವಾರ್ಥ ಪ್ರೇಮವು ಸಂಕಟಗಳೊಂದಿಗೆ ಮುಂದುವರೆಯುತ್ತದೆ. ಇಬ್ಬರೂ ಉದ್ಯೋಗಸ್ಥರಾಗಿ ಸ್ವಾವಲಂಬಿ ಸ್ವಾಭಿಮಾನದ ಬದುಕನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಮನೆಯಲ್ಲಿ ಕಾಣಿಸಿಕೊಳ್ಳುವ ಮಗುವಿನ ಹೆಜ್ಜೆಗಳು ಅವರೊಳಗೆ ಜೀವನಪ್ರೀತಿಯನ್ನು ಹೆಚ್ಚಿಸುತ್ತವೆ. ಈ ಹಂತದಲ್ಲಿಯೇ ಆ ಪತ್ನಿಯ ಸಹೋದರ ಮತ್ತವನ ಕಡೆಯವರು ದಿಢೀರನೆ ಮನೆಯೊಳಗೆ ಕಾಲಿಡುತ್ತಾರೆ. ಖುಷಿಗೊಂಡ ಅವಳು ತವರಿನವರೊಂದಿಗೆ ಮತ್ತೆ ಬಾಂಧವ್ಯ ಚಿಗುರಿಕೊಳ್ಳುವ ನಿರೀಕ್ಷೆಯಲ್ಲಿ ಮುಗ್ಧವಾಗಿ ಆತಿಥ್ಯ ನೀಡಲು ಮುಂದಾಗುತ್ತಾಳೆ. ಅದೇ ಸಮಯಕ್ಕೆ ಬರುವ ಪತಿಯೂ ಆತಿಥ್ಯ ನೀಡುತ್ತಾನೆ. ತಕ್ಷಣವೇ ಪಕ್ಕದ ಮನೆಯ ಗೃಹಿಣಿ ಅವರಿಬ್ಬರ ಮಗುವನ್ನು ತಂದು ಮನೆಯ ಮುಂದೆ ಬಿಟ್ಟು ಒಳಗೆ ಹೋಗುವಂತೆ ಸಂಜ್ಞೆ ನೀಡುತ್ತಾಳೆ. ಆ ಮಗು ಪುಟ್ಟ ಪುಟ್ಟ ಹೆಜ್ಜೆಯಿರಿಸಿ ಮನೆಯೊಳಗೆ ಪ್ರವೇಶಿಸುತ್ತದೆ. ಅದರ ಕಣ್ಣಿಗೆ ಅಪ್ಪ-ಅಮ್ಮ ನಿಶ್ಚಲವಾಗಿ ಕೆಳಗೆಬಿದ್ದಿರುವುದು ಕಾಣಿಸುತ್ತದೆ. ಪ್ರೇಕ್ಷಕರಿಗೆ ಅವರಿಬ್ಬರೂ ಕೊಲೆಯ ಕಾರಣಕ್ಕಾಗಿಯೇ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ ಎಂದು ಗೊತ್ತಾಗುತ್ತದೆ. ಬರೀ ಮೌನದೊಂದಿಗೆ ಆ ಮಗು ಅವರಿಬ್ಬರ ಕಡೆಗೆ ನೋಡುವುದಷ್ಟನ್ನೇ ಕ್ಯಾಮರಾ ತೋರಿಸುತ್ತದೆ. ತಾನು ಬಂದಾಗಲೂ ಅವರು ಪ್ರತಿಕ್ರಿಯಿಸದೇ ಇದ್ದಾಗ ಅದು ಅಳಲಾರಂಭಿಸುತ್ತದೆ. ಹಾಗೆ ಅಳುತ್ತಲೇ ಮನೆಯ ಹೊರಗೆ ಹೆಜ್ಜೆಯಿರಿಸಲಾರಂಭಿಸುತ್ತದೆ. ಆ ಮಗು ಪಕ್ಕದ ಮನೆಯ ಗೃಹಿಣಿಯ ಹತ್ತಿರ ಹೋಗುವ ಮುನ್ನ ತನ್ನ ತಾಯಿ ಅಂಗಳದಲ್ಲಿ ಮೂಡಿಸಿದ್ದ ರಂಗೋಲಿಯ ಅರ್ಧಚಿತ್ತಾರವನ್ನು ಹಾದುಹೋಗುತ್ತದೆ. ಆ ಹೆಜ್ಜೆಗಳು ರಕ್ತಮಯವಾಗಿರುತ್ತವೆ. ಅಪ್ಪ-ಅಮ್ಮನ ಹತ್ಯೆ, ರಕ್ತ, ಜಾತಿವ್ಯವಸ್ಥೆಯ ಕರಾಳತೆಯ ಸ್ವರೂಪ ಇವ್ಯಾವುದರ ಪರಿವೆಯೇ ಆ ಮಗುವಿಗಿರುವುದಿಲ್ಲ. ಆದರೆ ಇದನ್ನೆಲ್ಲವನ್ನು ನೋಡುವ ಪ್ರೇಕ್ಷಕರಿಗೆ ಈ ಸಾಮಾಜಿಕ ವ್ಯವಸ್ಥೆಯೊಳಗಿನ ಮೇಲು-ಕೀಳಿನ ಮಿತಿಗಳ ರಾಕ್ಷಸತ್ವದ ನಕಾರಾತ್ಮಕ ಪರಿಣಾಮ ಎಷ್ಟು ಕಠೋರ ಎಂಬುದು ಮನದಟ್ಟಾಗುತ್ತದೆ. ಕೊರಳು ಗದ್ಗದಿತವಾಗುತ್ತದೆ. ಒಡಲೊಳಗೆ ಅದೆಂಥದ್ದೋ ಮರಗುವಿಕೆ. ಅಲ್ಲಿಗೇ ಸಿನಿಮಾ ಮುಗಿಯುತ್ತದೆ. ಈ ಸಮಾಜ ಏಕೆ ಹೀಗೆ ಎಂಬ ಬೃಹತ್ ಪ್ರಶ್ನೆ ಮೊಳಕೆಯೊಡೆಯುತ್ತದೆ. ಅಷ್ಟು ಸುಲಭಕ್ಕೆ ಉತ್ತರ ಕಂಡುಕೊಳ್ಳಬಲ್ಲ ಪ್ರಶ್ನೆಯಲ್ಲವಿದು ಎಂಬ ಭಾವವನ್ನೂ ನೆಲೆಗೊಳಿಸಿಬಿಡುತ್ತದೆ.

ಜಾತಿ ಎಂಬ ವಾಸ್ತವವು ಮನುಷ್ಯರ ಬದುಕಿನೊಳಗೆ ತಂದೊಡ್ಡುವ ಸಂಕಟಗಳು ತೀವ್ರವಾಗಿರುತ್ತವೆ. ಶೋಷಕನಿಗೆ ಶ್ರೇಷ್ಠತೆಯ ಪಟ್ಟ ದಯಪಾಲಿಸುವ ಜಾತಿವ್ಯವಸ್ಥೆಯು ಶೋಷಿತನಿಗೆ ನರಕಯಾತನೆಯ ಅನುಭವವನ್ನೇ ಧಾರೆಯೆರೆಯುತ್ತದೆ. ಪ್ರಶ್ನಿಸುವಂತಿಲ್ಲ. ಅನುಭವಿಸಬೇಕಷ್ಟೆ. ಮನುಜಮತ, ವಿಶ್ವಪಥ ಎಂಬೆಲ್ಲಾ ತಾತ್ವಿಕ ದಾರ್ಶನಿಕತೆಗೆ ಜಾತಿಯ ಆವರಣದೊಳಗೆ ಸ್ಥಾನಮನ್ನಣೆ ಇರುವುದೇ ಇಲ್ಲ. ಆ ತಾತ್ವಿಕ ಸತ್ವ ಈ ಆವರಣ ಪ್ರವೇಶಿಸದಂತೆ ಶೋಷಕ ವಲಯವೇ ಎಚ್ಚರವಹಿಸುತ್ತದೆ. ಆದಷ್ಟು ಶೋಷಿತರನ್ನು ಅಂಧಕಾರದಲ್ಲಿಡುವ ನಿಗೂಢ ಕಾರ್ಯಸೂಚಿಯೊಂದಿಗೆ ಕಾರ್ಯಾಚರಣೆಗಿಳಿಯುತ್ತದೆ. ಧರ್ಮ ಮತ್ತು ದೇವರುಗಳ ಭಯವನ್ನು ಹುಟ್ಟಿಸಿ ತನ್ನ ಯಜಮಾನ್ಯವನ್ನು ಅಧಿಕೃತಗೊಳಿಸಿಕೊಳ್ಳುತ್ತದೆ. ಮನುಷ್ಯತ್ವದ ಮೌಲ್ಯವನ್ನು ಮತ್ತೆ ಮತ್ತೆ ಉಸಿರುಗಟ್ಟಿಸಿ ಇಂಚಿಂಚಾಗಿ ಸಾಯಿಸುವುದರ ಕಡೆಗೇ ತನ್ನ ಪ್ರಾಬಲ್ಯವನ್ನು ಮೆರೆಯುತ್ತದೆ. ಈ ಹಂತದಲ್ಲಿ ಪ್ರೇಮಿಸಿ ಒಂದಾಗಲು ಬಯಸುವ ಎರಡು ಮನಸುಗಳ ಭಾವನೆಗಳಿಗೆ ಅದು ಬೆಲೆ ನೀಡುವುದಿಲ್ಲ. ಒಂದಾಗುವ ಪ್ರಯತ್ನವನ್ನು ತಡೆಯುತ್ತದೆ. ಒಂದಾದರೆ ಮತ್ತೆ ಬೇರ್ಪಡಿಸುವುದಕ್ಕೆ ಮುಂದಾಗುತ್ತದೆ. ಹೆದರಿಸುತ್ತದೆ. ಕೊಲ್ಲುವ ಧಮ್ಕಿ ಹಾಕುತ್ತದೆ. ಅದಕ್ಕೂ ಕಿವಿಗೊಡದಿದ್ದರೆ ಕೊಂದೇಬಿಡುತ್ತದೆ. ತಾನು ಗೆದ್ದೆ ಎಂದು ಬೀಗುತ್ತದೆ. ಆದರೆ, ಅಷ್ಟರಲ್ಲಾಗಲೇ ಮನುಕುಲದ ಘನತೆಗೆ ಕುಂದುಂಟಾಗಿರುತ್ತದೆ.

ಒಂದಂತೂ ಸ್ಪಷ್ಟ. ಜಾತಿಶ್ರೇಷ್ಠತೆಯ ವ್ಯಸನಕ್ಕೀಡಾಗಿ ಪ್ರೇಮಿಗಳಿಬ್ಬರನ್ನು ಕೊಂದು ಮರ್ಯಾದೆ ಉಳಿಸಿಕೊಂಡ ಘನತೆವೆತ್ತ ಅಮಾನುಷ ಹಿರಿಯರು ತದನಂತರ ಸಾವಿರ ಅಥವಾ ಲಕ್ಷ ಲಕ್ಷ ವರ್ಷಗಳ ಕಾಲ ಬದುಕುತ್ತಾರಾ? ಅವರೂ ಎಂದಾದರೂ ಒಮ್ಮೆ ಸಾವಿಗೀಡಾಗಲೇಬೇಕಲ್ಲ. ಇನ್ನೊಬ್ಬರನ್ನು ಕೊಂದು ಕಾನೂನಿನ ದೃಷ್ಟಿಯಲ್ಲಿ ಅಪರಾಧಿಗಳಾದಾಗಲೂ ಅವರೊಳಗಿನ ಕ್ರೌರ್ಯ ಕರಗುವುದಿಲ್ಲ. ತಾವು ಮಾಡಿದ್ದೇ ಸರಿ ಎಂಬ ವಿತಂಡವಾದಿ ದೃಷ್ಟಿಕೋನದ ವರ್ತುಲದೊಳಗೆ ಅವರು ಬಂಧಿಯಾಗಿರುತ್ತಾರೆ. ’ನೀನು ಹೀಗೆ ಕೊಲೆಗೈಯ್ಯಬಾರದಿತ್ತು, ಸ್ವಂತ ಮಕ್ಕಳನ್ನೇ ಕೊಲ್ಲುವ, ಕೊಲ್ಲಿಸುವ ಮನಸ್ಥಿತಿಯನ್ನು ತಂದುಕೊಂಡದ್ದಾದರೂ ಏಕೆ?’ ಎಂಬ ಆತ್ಮಸಾಕ್ಷಿಯ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆಯನ್ನು ಅವರು ಯಾವತ್ತೋ ಕಳೆದುಕೊಂಡಿರುತ್ತಾರೆ. ಹಾಗಾಗಿಯೇ ಅವರೊಳಗೆ ಆತ್ಮಸಾಕ್ಷಿಯ ಧ್ವನಿಗಳು ಅನುರಣಿಸಿದಾಗ ಆತ್ಮಾವಲೋಕನಕ್ಕಿಳಿಯುವುದಿಲ್ಲ. ಅವರು ಆತ್ಮಸಾಕ್ಷಿಗೆ ಅನುಗುಣವಾಗಿ ಯೋಚಿಸದಿದ್ದರೂ ತಮ್ಮದೇ ಸಂಕುಚಿತ ದೃಷ್ಟಿಕೋನಗಳ ವರ್ತುಲದೊಳಗೆ ಸಿಲುಕಿ ಒದ್ದಾಡುವುದಂತೂ ಸತ್ಯ. ಅದನ್ನು ಅವರು ಬಹಿರಂಗವಾಗಿ ತೋರ್ಪಡಿಸಿಕೊಳ್ಳದೇ ಇರಬಹುದು. ಒಳಗೊಳಗೇ ಇಂಚಿಂಚಾಗಿ ಚಿಂತೆಗೀಡಾಗುವ ಸ್ಥಿತಿಯೊಂದಿಗಂತೂ ಆವಾಗಾವಾಗ ಮುಖಾಮುಖಿಯಾಗುತ್ತಲೇ ಇರುತ್ತಾರೆ. ಈ ಸಂದರ್ಭದಲ್ಲಿಯೇ ಮನುಷ್ಯಪ್ರಜ್ಞೆಯು ಅವರೆಡೆಗೆ ಕರುಣೆಯ ನೋಟ ನೆಡುತ್ತದೆ. ನೈತಿಕವಾಗಿ ತಾನು ಅಂಥ ಕ್ರೂರಿಗಳಿಗಿಂತ ಮುನ್ನಡೆ ಸಾಧಿಸಬಹುದಾದ ಸಾಧ್ಯತೆಗಳ ಹೆಮ್ಮೆಯ ಭಾವ ಮೂಡಿಸಿಕೊಳ್ಳುತ್ತದೆ. ಕ್ರೌರ್ಯದ ಜೊತೆಗಿನ ಸಂಘರ್ಷದ ವಾಸ್ತವ ನಿರಂತರ ಎಂಬ ನಿಜವನ್ನು ಗೊತ್ತುಮಾಡಿಕೊಂಡು ಗೆಲುವಿನ ಯಾನದ ಹೆಜ್ಜೆಗಳನ್ನಿಡಲಾರಂಭಿಸುತ್ತದೆ.

ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ
ಉಜಿರೆ – 574240
ಇ-ಮೇಲ್ ವಿಳಾಸ: nkpadmanabh@gmail.com
ಮೊಬೈಲ್: 9972998300

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions