ಇದು ಪ್ರೇಮಿಗಳ ದಿನಕ್ಕಾಗಿ ಅಲ್ಲ ಪ್ರತಿದಿನದ ಪ್ರೇಮಕ್ಕಾಗಿ…


Thursday, February 14th, 2019 4:12 pm

ಈಗಷ್ಟೇ ಬದುಕು ಶುರುವಾಗಿದೆ ಅನಿಸೋ ಹೊಸತರಹದ ಫೀಲ್ ಶುರುವಾಯಿಗಿದ್ದು ನಿನ್ನ ಪರಿಚಯದ ನಂತರ, ಹಾಗಾದರೆ ಇಷ್ಟು ದಿನ ಬದುಕಿದ ಬದುಕು ಎಂತಹದ್ದು ???… ಅಷ್ಟೆಲ್ಲಾ ಯೋಚಿಸುವಷ್ಟು ಪ್ರಭುದ್ಧ ಮನಸು ನನ್ನದಲ್ಲಾ,.. ಆದರೆ ಒಂದಂತೂ ಸ್ಪಷ್ಟ ನಾನಿದ್ದ ಲೋಕವು ಪ್ಲೇ ಸ್ಟೋರಿನ ಆಪ್ ನಂತೆ ನವೀಕರಣಗೊಂಡು ನೂತನವಾಗಿ ಕಾಣಿಸುವಂತೆ ಬಣ್ಣ ಬಳೆದುಕೊಂಡು ಕಲರ್ಫುಲ್ ಆಗಿ ಕಾಣುತ್ತಿರುವುದು ಹೃದಯದಲ್ಲಿ ನೀನಿಟ್ಟ ಹೆಜ್ಜೆ ಗುರುತುಗಳಿಂದಲೇ, ಆ ನಿನ್ನ ಹೆಜ್ಜೆ ಗೆಜ್ಜೆ ಸದ್ದುಗಳಿಗೆ ಇಂದು ವಂದನೆಯನ್ನ ಅರ್ಪಿಸುವ ಸಮಯ ಏಕೆಂದರೆ ಬದುಕು ಈಗಷ್ಟೇ ಶುರುವಾಗಿದೆ….

ತುಂಬಾ ಸಂಕೋಚದ ಮನಸು ದಾರಿತಪ್ಪಿದ್ದು ಹೊಸತೇನಲ್ಲಾ, ಹಿಂದೆ ಎಷ್ಟೋ ಬಾರಿ ದಾರಿ ತಪ್ಪಿ ಹಳ್ಳ ಹತ್ತಿ ಬಿದ್ದು ಎದ್ದು ಬಂದದ್ದು ಇದೆ ಆದರೆ ದಾರಿತಪ್ಪಿದ ಮನಸ್ಸನ್ನ ಹಿಡಿದು ಕಟ್ಟಿ ಹಾಕಿದ್ದು ನೀನು ಮಾತ್ರ, ತೀರ ಅಲ್ಲದಿದ್ದರೂ ಒಂದಿಷ್ಟು ಒರಟು ಸ್ವಭಾವದ ಮುಂಗೋಪಿಯನ್ನ ಸಹಿಸಿ ಕೊಂಡು ಜೊತೆಯಾಗಿರುವ ನಿನ್ನ ಅಚಲವಾದ ತಾಳ್ಮೆಗೆ ಇಂದು ವಂದನೆಯನ್ನ ಅರ್ಪಿಸುವ ಸಮಯ ಏಕೆಂದರೆ ಬದುಕು ಈಗಷ್ಟೇ ಶುರುವಾಗಿದೆ….

ನಿನ್ನ ವಾಟ್ಸಪ್ ಡಿಪಿಯನ್ನು ಪದೇ ಪದೇ ನೋಡಿ ಹುಚ್ಚನಂತೆ ಹುಸಿ ನಗು ತರಿಸಿಕೊಳ್ಳುವ ಮೊಗವ ಹೇಗೆ ಮುಚ್ಚಿಕೊಳ್ಳಲ್ಲಿ ? ನಿನ್ನನ್ನು. ಡ್ರಾಪ್ ಮಾಡಿ ಮುಂದೆಲ್ಲೋ ಸಿಗುವ ಸಿಗ್ನಲ್ ನಲ್ಲಿ ಬೈಕಿನ ಮಿರರಲ್ಲಿ ನನ್ನೇ ನಾ ನೋಡಿಕೊಳ್ಳುವಾಗ ಹೆಗಲ ಮೇಲೆ ಸಿಗುವ ಉದ್ದನೆಯ ಕಪ್ಪು ಕೂದಲಿಗೆ ಇಂದು ವಂದನೆಯನ್ನ ಅರ್ಪಿಸುವ ಸಮಯ ಏಕೆಂದರೆ ಬದುಕು ಈಗಷ್ಟೇ ಶುರುವಾಗಿದೆ….

ನೆನಪಿಸಿಕೊಳ್ಳಲೇ ಬೇಕಾದ ಒಂದು ಸಂದರ್ಭ ನಮ್ಮ ಪ್ರೇಮ ಪುಟಗಳಲ್ಲಿ ದಪ್ಪ ಅಕ್ಷರಗಳಲ್ಲಿ ದಾಖಲಾಗಿರುವ ಪ್ರೇಮ ಬರಹ, “ಉಳಿ ತಾಕಿದರೆ ಅದು ಬರೇ ಶಿಲೆ ತುಟಿ ತಾಕಿದರೆ ಅದು ಪ್ರೇಮ ಸೆಲೆ… ಶೃಂಗಾರದ ಕಲೆ… ಒಂಟಿತನದ ಕೊಲೆ.. ಎರಡು ಮನಸುಗಳ ಮೊದ ಮೊದಲ ಉಡುಗೊರೆ..” ಇದು ಕಾಲು ಜಾರುವ ಮೊದಲ ಹಂತ ಅಂತ ಗೊತ್ತಿದ್ದರೂ ಅಂದು ಅವಿಸ್ಮರಣೀಯ ಮೊದಲ ಗಿಫ್ಟ್ ಕೊಟ್ಟ ನಿನ್ನ ತುಟಿಗಳಿಗೆ ಇಂದು ವಂದನೆಯನ್ನ ಅರ್ಪಿಸುವ ಸಮಯ ಏಕೆಂದರೆ ಬದುಕು ಈಗಷ್ಟೇ ಶುರುವಾಗಿದೆ….

ಮಳೆಯ ಹನಿಗಳ ನಡುವೆ ಕೊಡೆಯಾಗುವ, ಬಿಸಿಲ ದಗೆಯ ಬೆವರಿನ ಹನಿಗೆ ಕರ್ಚಿಫ್ ಆಗುವ, ಬೌಂಡರಿ ದಾಟಲು ಹಪಾಹಪಿಸುವ ತುಂಟ ಕೈಗಳ ಕಟ್ಟಿ ಹಾಕುವ, ಕಣ್ಣಾ ಮುಚ್ಚಾಲೆಯ ಆಟಕ್ಕೆ ಕಣ್ ಪಟ್ಟಿಯಾಗುವ, ಚಳಿಯ ಗಾಳಿಗೆ ಬೆಚ್ಚನೆಯ ಮೈ ಹೊದಿಕೆ ಆಗುವ ಹೀಗೆ ಹಲವು ಮಲ್ಟಿ ಟಾಸ್ಕ್ ಗಳನ್ನ ನಿಭಾಯಿಸುವ ನಿನ್ನಾ ದಾವಣಿಗಳಿಗೆ ಇಂದು ವಂದನೆಯನ್ನ ಅರ್ಪಿಸುವ ಸಮಯ ಏಕೆಂದರೆ ಬದುಕು ಈಗಷ್ಟೇ ಶುರುವಾಗಿದೆ….

ನನ್ನ ವಂದನೆಗಳಿಗೆ ಕೊನೆಯಿಲ್ಲ ನೀನು ಅಗಾದ ಅಮೂಲ್ಯ ಅಮೂರ್ತ ಪ್ರೇಮದ ಮುನ್ನುಡಿ ಬರೆದಷ್ಟು ಬರೆಸಿಕೊಳ್ಳುವ ಪುಟ ಮುಗಿಯದ ಪುಸ್ತಕ… ನೀನು ಎನ್ನುವ ನನ್ನೊಳ ಆತ್ಮದ ನಿನಗೆ ಶಿರ್ಫ್ ನಿನಗೆ ಮಾತ್ರ ಇಂದು ವಂದನೆಯನ್ನ ಅರ್ಪಿಸುವ ಸಮಯ ಏಕೆಂದರೆ ಬದುಕು ಈಗಷ್ಟೇ ಶುರುವಾಗಿದೆ…. ವಂದನೆಗಳು ಹುಡುಗಿ ಕೋಟಿ ಕೋಟಿ ವಂದನೆಗಳು…

& i just want to say that i love you…❤
yours truly – ಮಂಜು ಎಂ ದೊಡ್ಡಮನಿ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions