ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಿಹಿ ಸುದ್ದಿ ನೀಡಿದ ವಾಲ್ಮೀಕಿ ಸಮಾಜ
Friday, October 12th, 2018 3:24 pm
ಚಿತ್ರದುರ್ಗ: ಮದಕರಿ ನಾಯಕ ಚಿತ್ರದಲ್ಲಿ ಯಾವ ನಟನಾದ್ರೂ ನಟಿಸಲಿ ನಮ್ಮ ಅಭ್ಯಂತರ ಇಲ್ಲ. ಇತಿಹಾಸ ಮರೆಮಾಚದಂತೆ ಚಲನಚಿತ್ರ ಮಾಡಲಿ ಎಂದು ವಾಲ್ಮೀಕಿ ಯುವ ಪಡೆ ಹಾಗೂ ಕಾಂಗ್ರೆಸ್ನ ಎಸ್ಟಿ ಸೆಲ್ ಅಧ್ಯಕ್ಷ ಅಂಜಿನಪ್ಪ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಆಡಳಿತ ನಡೆಸಿದ ಮದಕರಿ ನಾಯಕನ ಐತಿಹಾಸಿಕ ಚಲನಚಿತ್ರ ಮಾಡಲು ಇದೀಗ ಇಬ್ಬರು ನಟರ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಒಂದೆಡೆ ನಾಯಕ ಸಮಾಜದ ಸುದೀಪ್ ಚಿತ್ರ ಮಾಡಲು ಪಣ ತೊಟ್ಟರೆ, ಇತ್ತ ತೂಗುದೀಪ್ ದರ್ಶನ್ ಕೂಡ ಮದಕರಿ ನಾಯಕನ ಚಿತ್ರದಲ್ಲಿ ನಟಿಸಲು ಮುಂಚೂಣಿಯಲ್ಲಿದ್ದಾರೆ.
ಚಿತ್ರದಲ್ಲಿ ಯಾವ ನಟನಾದ್ರೂ ನಟಿಸಲಿ ನಮ್ಮ ಅಭ್ಯಂತರ ಇಲ್ಲ. ಆದ್ರೆ ಇದಕ್ಕೆ ಜಾತಿ ಬಣ್ಣವನ್ನು ಕಟ್ಟಿ ನಮ್ಮ ಸಮಾಜಕ್ಕೆ ಕೆಟ್ಟ ಹೆಸರು ತರಬಾರದು ಎಂದರು. ಈ ಸಿನಿಮಾ ವಿಚಾರವಾಗಿ ಕೆಲವರು ನಮ್ಮ ಸಮಾಜದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದು ನಾಯಕ ಸಮಾಜಕ್ಕೆ ಕಪ್ಪು ಮಸಿ ಬಳಿಯುವ ಸಂಚು ಎಂದು ನಾಯಕ ಸಮಾಜದ ಕೆಲ ಮುಖಂಡರು ಆರೋಪಿಸಿದ್ದಾರೆ.