ವಾಸ್ತುಶಿಲ್ಪದ ತೊಟ್ಟಿಲು ಐಹೊಳೆಯ ವೈಶಿಷ್ಟ್ಯತೆಗಳೇನು ..? ತಪ್ಪದೇ ಓದಿ


Saturday, September 9th, 2017 2:44 pm


ಸ್ಪೇಷಲ್ ಡೆಸ್ಕ್ : ಬಾದಾಮಿ ಚಾಳುಕ್ಯರ ಕಾಲದಲ್ಲಿ ವೈಭವೋಪೇತವಾಗಿ ಮೆರೆದ ಐಹೊಳೆ. ಭಾರತೀಯ ದೇವಾಲಯಗಳ ಪೈಕಿ ವಾಸ್ತು ಶಿಲ್ಪದ ತವರು ಎಂದೇ ಖ್ಯಾತವಾದದ್ದು ಐಹೊಳೆ. ಬಾದಾಮಿ ಚಾಳುಕ್ಯರ ಕಾಲದಲ್ಲಿ ವೈಭವೋಪೇತವಾಗಿ ಮೆರೆದ ಈ ಗ್ರಾಮ ಇಂದು ವಿಶ್ವವಿಖ್ಯಾತವಾಗಲು ಇಲ್ಲಿನ ಕೋಟೆಯ ಒಳಗೆ ಹಾಗೂ ಹೊರಗೆ ಹರಡಿಕೊಂಡಿರುವ ಶಿಲ್ಪಕಲಾಶ್ರೀಮಂತಿಕೆಯ 125ಕ್ಕೂ ಹೆಚ್ಚು ಚಿಕ್ಕ ದೊಡ್ಡ ದೇವಾಲಯಗಳೇ ಕಾರಣ. ಹೀಗಾಗೆ ಈ ಊರನ್ನು ಹಿಂದೂ ದೇವಾಲಯಗಳ ವಾಸ್ತು ಶಿಲ್ಪದ ತೊಟ್ಟಿಲೆಂದೇ ಕರೆಯುತ್ತಾರೆ.

ಇತಿಹಾಸ: ಮಲಪ್ರಭಾ ನದಿಯ ಬಲದಂಡೆಯ ಮೇಲೆ ಪ್ರಶಾಂತವಾಗಿ ಮಲಗಿರುವಂತೆ ತೋರುವ ನಿಸರ್ಗ ರಮಣೀಯ ತಾಣಕ್ಕೆ ಹಿಂದೆ ಅಯ್ಯೋಹೊಳೆ ಎಂದು ಹೆಸರಿತ್ತಂತೆ. ಅಯ್ಯ ಅಥವಾ ಅಯ್ಯನೋರು ಎಂದರೆ ಗುರುಗಳು, ಪಂಡಿತರು ಎಂದು ಅರ್ಥ. ಈ ಊರು ವಿದ್ಯಾಕೇಂದ್ರವಾಗಿ ಅಯ್ಯಗಳಿಂದ ತುಂಬಿದ್ದ ಕಾರಣ ಇದಕ್ಕೆ ಆ ಹೆಸರು ಬಂದಿತ್ತೆಂಬ ವಾದವಿದೆ. ಮತ್ತೊಂದು ಕಥೆಯ ರೀತ್ಯ ಕ್ಷತ್ರಿಯರ ರುಂಡ ಚೆಂಡಾಡಿದ ಪರಶುರಾಮ ಮಲಪ್ರಭೆಯ ಹೊಳೆಯಲ್ಲಿ ತನ್ನ ಪರಶುವನ್ನು ತೊಳೆದಾಗ ಇಡೀ ನದಿ ನೀರು ಕೆಂಪಾಯಿತು. ಮುಂಜಾನೆ ಈ ನೀರು ಕಂಡ ಮಹಿಳೆಯರು ಅಯ್ಯಯ್ಯೋ ಹೊಳೆ ಎಂದು ಉದ್ಗರಿಸಿದರು. ಹೀಗಾಗೆ ಈ ಊರು ಐಹೊಳೆಯಾಯ್ತು.

ಐಹೊಳೆ ಅತ್ಯಂತ ಪ್ರಾಚೀನ ಗ್ರಾಮ. ಇಲ್ಲಿ ಕ್ರಿ.ಪೂ. 6-7ನೇನೇ ಶತಮಾನದಲ್ಲಿ ಅಂದರೆ ಕಬ್ಬಿಣದ ಯುಗದಲ್ಲೇ ಇಲ್ಲಿ ಜನವಸತಿ ಇತ್ತೆಂದು ಪ್ರಾಗೈತಿಹಾಸಿಕ ಸಂಶೋಧಕರು ಅಂದಾಜು ಮಾಡಿದ್ದಾರೆ. ಇಲ್ಲಿ ಉಸಗು ಕಲ್ಲಿನಿಂದ ಮತ್ತು ಕತ್ತರಿಸಿದ ಬಂಡೆಗಳನ್ನು ಗಾರೆ, ಮಣ್ಣಿನ ನೆರವಿಲ್ಲದೆ ಒಂದರ ಮೇಲೊಂದು ಇಟ್ಟು ನಿರ್ಮಿಸಿದ ಕೋಟೆಯಿದೆ. ಇದನ್ನು ಸುಮಾರು ಕ್ರಿ.ಶ. 6ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದ್ದು ಕರ್ನಾಟಕದಲ್ಲಿ ಉಳಿದಿರುವ ಶಿಲಾಕೋಟೆಗಳ ಪೈಕಿ ಇದು ಅತ್ಯಂತ ಪ್ರಾಚೀನವಾದ್ದಾಗಿದೆ. ಕೋಟೆಯ ಸುತ್ತ ಕಂದಕ ಇರುವುದನ್ನು ಈಗಲೂ ಗುರುತಿಸಬಹುದಾಗಿದ್ದು, ಕೋಟೆಯ ಅವಶೇಷಗಳನ್ನು ಕಾಣಬಹುದು.

ವಾಸ್ತುಶಿಲ್ಪ: ಐಹೊಳೆಯ ಕೋಟೆಯನ್ನು ಉತ್ತರ ರಸ್ತೆಯಿಂದ ಪ್ರವೇಶಿಸುತ್ತಿದ್ದಂತೆಯೇ ಕಾಣುವ ಕ್ರಿಸ್ತ ಶಕ 5ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸುಂದರ ಹಾಗೂ ಮನಮೋಹಕ ಕೆತ್ತನೆಗಳಿಂದ ಕಂಗೊಳಿಸುವ ದುರ್ಗೆಯ ಮಂದಿರ ಮನಸೆಳೆಯುತ್ತದೆ. ದೇವಾಲಯದ ಮುಖಮಂಟಪದ ಭಿತ್ತಿಯ ಅಡ್ಡಪಟ್ಟಿಕೆಗಳಲ್ಲಿ ರಾಮಲಕ್ಷ್ಮಣ ಸೀತಾಮಾತೆಯನ್ನು ಗುಹ -ನಾವೆಯ ನೆರವಿನಿಂದ ನದಿ ದಾಟಿಸಿದ ಸುಂದರ ಉಬ್ಬುಶಿಲ್ಪವಿದೆ. ಪುರಾಣ, ಪುಣ್ಯಕಥೆಗಳ ಹಲವು ಕಥಾನಕಗಳು ಇಲ್ಲಿವೆ.

ಐಹೊಳೆಯ ದೇವಾಲಯಗಳನ್ನು ಪುರಾತತ್ವ ಸರ್ವೇಕ್ಷಣ ಇಲಾಖೆ 22 ವಿಭಾಗಳಾಗಿ ವಿಂಗಡಿಸಿದೆ. ಇದರಲ್ಲಿ ಹುಚ್ಚಿಮಲ್ಲಿಗುಡಿ, ಲಡಖಾನ್ ಗುಡಿ, ಹುಚ್ಚಪ್ಪಯ್ಯಮಠ, ಗಳಗನಾಥ, ರಾವಲ್ ಪಹಡಿ, ಗುಹಾಂತರ ದೇವಾಲಯ, ಜೈನರ ಮೇಗುತಿ ದೇವಾಲಯ, ಎರಡು ಅಂತಸ್ತಿನ ಜೈನ ದೇವಾಲಯ ಪ್ರಮುಖ ಆಕರ್ಷಣೆ.ಬೆಂಗಳೂರಿನಿಂದ 460, ಬಿಜಾಪುರದಿಂದ 110 ಹಾಗೂ ಬಾದಾಮಿಯಿಂದ 40 ಕಿ.ಮೀಟರ್ ದೂರದಲ್ಲಿರುವ ಈ ಸುಂದರ ತಾಣ ಕರುನಾಡ ಕಲಾಶ್ರೀಮಂತಿಕೆಗೆ ಸಾಕ್ಷಿಯಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions